ನಾಳೆ ಉಮಾಪತಿ ಚುಕ್ಕಿ 37ನೇ ಪುಣ್ಯಸ್ಮರಣೋತ್ಸವ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.9
ಚುಕ್ಕಿ ಪ್ರತಿಷ್ಠಾನದ ವತಿಯಿಂದ ಮಾನವಿ ತಾಲೂಕಿನ ಸಿರವಾರ ಪಟ್ಟಣದಲ್ಲಿ ಜೂ.11ರಂದು ಲಿಂ.ಉಮಾಪತಿ ಚುಕ್ಕಿಯವರ 37ನೇ ಪುಣ್ಯ ಸ್ಮರಣೋತ್ಸವ ಹಾಗೂ ಬಸವ ತತ್ವ ಚಿಂತನಾ ಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವಿವರವನ್ನು ಚುಕ್ಕಿ ಪ್ರತಿಷ್ಠಾನದ ಮುಖ್ಯಸ್ಥ ಚುಕ್ಕಿ ಸೂಗಪ್ಪ ಸಾಹುಕಾರ್ ಹೇಳಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿರವಾರದ ದೇವದುರ್ಗದ ಕ್ರಾಸ್‌ನಲ್ಲಿರುವ ಚುಕ್ಕಿ ರುದ್ರಮ್ಮ ಉಮಾಪತೆಪ್ಪ ಕಲ್ಯಾಣ ಮಂಟಪದಲ್ಲಿ ಜೂ.11ರಂದು ಸಂಜೆ 6ಕ್ಕೆ ಬಸವ ತತ್ವ ಚಿಂತನಾ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.
ಮೆರವಣಿಗೆ: ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಬಸವಾದಿ ಶರಣರ ಪೂಜೆ ಹಾಗೂ ಗಣಾರಾಧನೆ, ಬಸವ ಜಯಂತಿ ಶತಮಾನೋತ್ಸವ ಅಂಗವಾಗಿ ಮಧ್ಯಾಹ್ನ 4ರಿಂದ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಸಿರವಾರ ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಂಜೆ 6ಕ್ಕೆ ನಡೆಯುವ ಬಸವ ತತ್ವ ಚಿಂತನಾಗೋಷ್ಠಿ ನೇತೃತ್ವವನ್ನು ಬೆಳಗಾವಿ ಜಿಲ್ಲೆ ಬೈಲೂರು ನಿಷ್ಕಲ ಮಂಟಪದ ಶ್ರೀನಿಜಗುಣಾನಂದ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ನವಲಕಲ್ ಬ್ರಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು ವಹಿಸುವರು ಎಂದು ತಿಳಿಸಿದರು.
ಗುಲ್ಬರ್ಗದ ಶರಣೆ ವಿಲಾಸವತಿ ಖೂಬಾ ಗೋಷ್ಠಿ ಉದ್ಘಾಟಿಸಲಿದ್ದು, ಎನಗಿಂತ ಕಿರಿಯರಿಲ್ಲ ಎಂಬ ವಿಷಯದ ಕುರಿತು ಸಂಜಯ ಮಾಕಲ್ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಪಾಲ್ಗೊಳ್ಳಲಿದ್ದಾರೆ.
ನೂತನ ಶಾಸಕರಾದ ಡಾ.ಶಿವರಾಜ್ ಪಾಟೀಲ್, ತಿಪ್ಪರಾಜ ಹವಾಲ್ದಾರ್, ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಪ್ರತಾಪಗೌಡ ಪಾಟೀಲ್, ಮಾನಪ್ಪ ವಜ್ಜಲ್ ಅವರನ್ನು ಸನ್ಮಾನಿಸಲಾಗುತ್ತದೆ. ಅತಿಥಿಯಾಗಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಅಯ್ಯಪ್ಪ ತುಕ್ಕಾಯಿ ಪಾಲ್ಗೊಳ್ಳಲಿದ್ದಾರೆ.
ಸನ್ಮಾನ: ಚುಕ್ಕಿ ಪ್ರತಿಷ್ಠಾನದಿಂದ ವಿವಿಧ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಯೋಜಿಸಿದ್ದು, ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಸಿರವಾರ ಪಟ್ಟಣದ ಬಸವೇಶ್ವರ ಪ.ಪೂ.ಕಾಲೇಜಿನ ವಿದ್ಯಾರ್ಥಿನಿಯರಾದ ಶ್ರೀದೇವಿ, ಸ್ವಾತಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ನಾಗರತ್ನ, ವೀಣಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ.
ಪ್ರತಿಷ್ಠಾನದಿಂದ ಕಳೆದ ಕೆಲ ವರ್ಷಗಳ ಹಿಂದೆ ಹೈ.ಕ. ಭಾಗದ ಲೇಖಕರಿಗೆ ರು. 21ಸಾವಿರ ನಗದು ನೀಡಿ ಗೌರವಿಸಲಾಗುತ್ತಿತ್ತು. ಆದರೆ ಕೆಲ ವರ್ಷಗಳಿಂದ ಈ ಕಾರ್ಯ ಸ್ಥಗಿತಗೊಂಡಿದ್ದು, ಮುಂದಿನ ವರ್ಷದ ಕಾರ್ಯಕ್ರಮದ ವೇಳೆ ಹೆಸರಾಂತ ಬರೆಹಗಾರರಿಗೆ ಈ ನಗದು ಪುರಸ್ಕಾರ ನೀಡುವ ನಿಟ್ಟಿನಲ್ಲಿ ಶೀಘ್ರವೇ ಸಮಿತಿಯೊಂದನ್ನು ರಚಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಹಳ್ಳೂರು, ಅಯ್ಯಪ್ಪ ತುಕ್ಕಾಯಿ, ಶಿವಾನಂದ ಇದ್ದರು.