ಭಾಷೆ ರಕ್ಷಣೆ: ಕರವೇ ಕಾರ್ಯಕ್ಕೆ ಮೆಚ್ಚುಗೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.10
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡಪರ ಸಂಘಟನೆ ಕರವೇ ಪಾತ್ರ ಮಹತ್ವದ್ದಾಗಿದೆ. ಅದರಲ್ಲೂ ಬೆಂಗಳೂರಿನಿಂದ ಕನ್ನಡ ಭಾಷೆ ಮಾಯವಾಗುತ್ತಿರುವ ದಿನಗಳಲ್ಲಿ ಕನ್ನಡಕ್ಕಾಗಿ ಸಂಘಟನೆ ನಿರಂತರ ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಂದು ಸಾಹಿತಿ ಭಗತರಾಜ್ ನಿಜಾಮಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ನಗರದ ಐಎಂಎ ಹಾಲ್ ನಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ 47ನೇ ಜನ್ಮದಿನದ ಅಂಗವಾಗಿ ಸಂಘಟನೆಯ ಜಿಲ್ಲಾ ಘಟಕ ಮತ್ತು ಆರೋಗ್ಯ ಇಲಾಖೆ, ರೆಡ್ ಕ್ರಾಸ್ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಸ್ಯೆಗಳಿಗೆ ಧ್ವನಿ: ರಕ್ತದಾನ ಬಹಳ ಶ್ರೇಷ್ಠವಾದುದು. ರಕ್ತದಾನದ ಮೂಲಕ ಮಾನವನ ಜೀವ ಉಳಿಸುವ ಕಾರ್ಯಕ್ಕಿಂತ ಶೇಷ್ಠ ಕಾರ್ಯ ಮತ್ತೊಂದಿಲ್ಲ. ಕರವೇ ಸಂಘಟನೆ ಕಾರ್ಯಕರ್ತರು ಜಿಲ್ಲೆಯಲ್ಲಿ ಈಗಾಗಲೇ ಅನೇಕ ಜನಪರ ಹೋರಾಟಗಳ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ. ಮುಂದಿನ ದಿನಗಳಲ್ಲಿಯೂ ಕರವೇ ಸಂಘಟನೆಯು ಹತ್ತಾರು ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ಪ್ರಗತಿಗೆ ಉತ್ತಮ ಕೊಡುಗೆ ನೀಡಲೆಂದು ಆಶಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ನಾಯಕ ಮಾತನಾಡಿ, ರಕ್ತದ ಕೊರತೆಯಿಂದ ನಗರ ಸೇರಿದಂತೆ ಜಿಲ್ಲೆಯಲ್ಲಿ ಅನೇಕರು ಸಮಸ್ಯೆ ಎದುರಿಸುತ್ತಿದ್ದಾರೆ. ಅಂಥವರಿಗೆ ರಕ್ತದಾನ ಶಿಬಿರಗಳಿಂದ ಪ್ರಯೋಜನವಾಗಲಿದೆ ಎಂದು ತಿಳಿಸಿದರು.
ಹೆಚ್ಚು ಅಗತ್ಯ: ಪ್ರತಿ ತಾಲೂಕು ಕೇಂದ್ರದಲ್ಲಿ ರಕ್ತದ ತುರ್ತು ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ರಕ್ತದ ಕೊರತೆ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ತಾಲೂಕು, ಹೋಬಳಿ ಮತ್ತು ಗ್ರಾಮೀಣ ಭಾಗಗಳಲ್ಲಿ ರಕ್ತದಾನ ಶಿಬಿರಗಳು ಹೆಚ್ಚೆಚ್ಚು ಆಯೋಜಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕಿಲ್ಲೆ ಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸುಭಾಷ ಪಾಟೀಲ್ ಶಾವಂತಗೇರಾ, ಡಾ. ಪ್ರಸನ್ನ ಕುಮಾರ್, ಡಾ.ಸಿ.ಎನ್. ಕುಲಕರ್ಣಿ, ಡಾ. ಬಸನಗೌಡ, ಕರವೇ ಜಿಲ್ಲಾಧ್ಯಕ್ಷ ವಿನೋದ ರೆಡ್ಡಿ, ಕರವೇ ತಾಲೂಕು ಅಧ್ಯಕ್ಷರು, ಕಾರ್ಯಕರ್ತರು ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಜನರು ಸಮಾರಂಭದಲ್ಲಿದ್ದರು. ನಂತರ ಕರವೇ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಸಂಘಟನೆ ರಾಜ್ಯಾಧ್ಯಕ್ಷ ನಾರಾಯಣಗೌಡರ ಜನ್ಮದಿನ ಆಚರಿಸಿದರು.
--