ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವೇಣಿಸೋಂಪುರಕ್ಕೆ ಮಂತ್ರಾಲಯ ಉಭಯಶ್ರೀ ಭೇಟಿ; ಭವ್ಯ ಸ್ವಾಗತ

Lingaraj Badiger
Updated On : 11 Jun 2013, 11:22 am

ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.10
ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಸುಯತೀಂದ್ರ ತೀರ್ಥರು ತಮ್ಮ ಉತ್ತರಾಧಿಕಾರಿ ಸುಬುಧೇಂದ್ರ ತೀರ್ಥರು ಈಚೆಗೆ ತಾಲೂಕಿನ ಗಡಿ ಗ್ರಾಮ ಆಂಧ್ರಪ್ರದೇಶದ ಐಜಾ ಬಳಿಯ ಶ್ರೀಕ್ಷೇತ್ರ ವೇಣಿಸೋಂಪುರಕ್ಕೆ ಭೇಟಿ ನೀಡಿದರು.
ಉಭಯ ಶ್ರೀಗಳು ವೇಣಿಸೋಂಪುರಕ್ಕೆ ಆಗಮಿಸುತ್ತಿದ್ದಂತೆಯೇ ನೂರಾರು ಸಂಖ್ಯೆಯ ಭಕ್ತರು ಅವರನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡು ಭವ್ಯ ಮೆರವಣಿಗೆಯಲ್ಲಿ ಸಕಲ ವಾದ್ಯವೃಂದ ಮತ್ತು ವೇದಘೋಷಗಳೊಂದಿಗೆ ಶ್ರೀಗಳನ್ನು ವ್ಯಾಸತತ್ವಜ್ಞರ ವೃಂದಾವನ ಸ್ಥಳಕ್ಕೆ ಕರೆತಂದರು.
ವ್ಯಾಸತತ್ವಜ್ಞರ ವಂಶಸ್ಥರು ಸೇರಿದಂತೆ ಹಲವಾರು ದಂಪತಿಗಳು ಉಭಯ ಶ್ರೀಗಳ ಪಾದಪೂಜೆ ಈ ವೇಳೆ ನೆರವೇರಿಸಿದರು. ನಂತರ ಕಿರಿಯ ಶ್ರೀಗಳಾದ ಶ್ರೀಸುಬುಧೇಂದ್ರತೀರ್ಥರು ನೂರಾರು ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿ ಫಲ-ಮಂತ್ರಾಕ್ಷತೆಗಳನ್ನಿತ್ತು ಆಶೀರ್ವದಿಸಿದರು.
ಬೆಳ್ಳಿ ಗಟ್ಟಿ ಸಮರ್ಪಣೆ: ಉಭಯ ಶ್ರೀಗಳು ಸಂಸ್ಥಾನದ ಮನ್ಮೂಲರಾಮ ದೇವರ ಪೂಜೆ ನೆರವೇರಿಸಿದರು. ಅಲ್ಲದೇ ವ್ಯಾಸತತ್ವಜ್ಞರ ಮೂಲ ವೃಂದಾವನಕ್ಕೆ ಬೆಳ್ಳಿ ಕವಚ ಸಮರ್ಪಿಸಲು ಸಂಕಲ್ಪಗೈದು ಶ್ರೀಮಠದ ವತಿಯಿಂದ ಐದು ಕೆ.ಜಿ ಬೆಳ್ಳಿಯ ಗಟ್ಟಿಯನ್ನು ಈ ಸಂದರ್ಭದಲ್ಲಿ ನೀಡಿದರು. ವ್ಯಾಸತತ್ವಜ್ಞರು ಪ್ರತಿಷ್ಠಾಪಿಸಿರುವ ಶೋಡಷಬಾಹು ನರಸಿಂಹದೇವರು ಹಾಗೂ ಸಂತಾನ ಗೋಪಾಲಕೃಷ್ಣ ದೇವರಿಗೆ ಉಭಯ ಶ್ರೀಗಳು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ವಿದ್ವಾಂಸರಾದ ಪಂಡಿತ ಕೇಸರಿ ರಾಜಾ ಎಸ್. ಗಿರಿಯಾಚಾರ್ಯರು, ಮಂತ್ರಾಲಯದ ಮೂಲ ವೃಂದಾವನದ ಅರ್ಚಕ ಪರಿಮಳಾಚಾರ್ಯ, ದ್ವಾರಪಾಲಕ ಆನಂದರಾವ್ ಸೇರಿ ಅನೇಕ ವಿದ್ವಾಂಸರು ಶ್ರೀಗಳೊಂದಿಗಿದ್ದರು.
ಧಾರ್ಮಿಕ ಕಾರ್ಯಕ್ರಮ: ವ್ಯಾಸತತ್ವಜ್ಞರ ವಂಶಸ್ಥರಾದ ರಾಮಮೂರ್ತಿ ಆಚಾರ್ಯ, ಅಡವ್ಯಾಚಾರ್ಯ ಮತ್ತು ಪರಿವಾರದವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ರಾಯಚೂರಿನ ಬ್ರಾಹ್ಮಣ ಸಮಾಜದ ಗಣ್ಯರಾದ ನರಸಿಂಗರಾವ್ ದೇಶಪಾಂಡೆ ಮುದ್ಗಲ್, ಕೆ.ಆರ್. ಇನಾಂದಾರ್, ಭೀಷ್ಮಾಚಾರ್ಯ ಗಡಚಿಂತಿ, ಸೇತುಮಾಧವರಾವ್ ಕನಕವೀಡು, ಗಿರೀಶ್ ಕನಕವೀಡು, ಕಿಶನರಾವ್, ಪುರುಷೋತ್ತಮ ಕಿನ್ನಾಳ ಸೇರಿ ನೂರಾರು ಭಕ್ತರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement