ವೈಭವದಿಂದ ಜರುಗಿದ ಕಾಖಂಡಕಿ ಜಾತ್ರೆ
ಜೇವರ್ಗಿ: ತಾಲೂಕಿನ ಸುಕ್ಷೇತ್ರ ಕಾಖಂಡಕಿಯಲ್ಲಿ ಕಳೆದ ಭಾನುವಾರ ಗುರು ಮಲ್ಲಾರಾಧ್ಯರ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಉತ್ಸವದ ನಿಮಿತ್ತ ನಾಲವಾರ ಕೋರಿಸಿದ್ಧೇಶ್ವರ ಮಠದ ಪೀಠಾಧಿಪತಿ ಡಾ. ಸಿದ್ಧತೊಟೇಂದ್ರ ಶಿವಾಚಾರ್ಯರು ಗುರು ಮಲ್ಲಾರಾಧ್ಯರಿಗೆ ವಿಶೇಷ ಪೂಜೆ ನೆರೆವೇರಿಸಿದರು. ಉತ್ಸವದ ನಿಮಿತ್ತ ಶನಿವಾರ ಮಧ್ಯರಾತ್ರಿ ನಾಲವಾರ ಶ್ರೀಗಳ ಸನ್ನಿಧಿಯಲ್ಲಿ ನೂರಾರು ಮುತ್ತೈದೆಯರ ತನಾರತಿ ಕಾರ್ಯಕ್ರಮ ನೆರವೇರಿಸಿದರು. ಭಾನುವಾರ ನೂರಾರು ಭಕ್ತಾದಿಗಳು ನಾಲವಾರ ಶ್ರೀಗಳ ಪಾದಪೂಜೆ ನೆರವೇರಿಸಿದರು. ಸಂಜೆ ಶ್ರೀಗಳು 500 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಹಸ್ರಾರು ಭಕ್ತ ಸಮೂಹದ ಜಯಘೋಷದ ಮಧ್ಯೆ ನಾಲವಾರ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ಯವಕನ ಕೊಲೆ
ಗುಲ್ಬರ್ಗ: ಮದುವೆ ಆಹ್ವಾನ ಪತ್ರಿಕೆಗಳೊಂದಿಗೆ ಸ್ನೇಹತನ ಜೊತೆಗೂಡಿ ಬೈಕ್ನಲ್ಲಿ ತೆರಳುತ್ತಿದ್ದ ಯುವಕನನ್ನು ಅಪರಿಚಿತರು ಕೊಲೆ ಮಾಡಿ ಪರಾರಿಯಾದ ಘಟನೆ ಅಫಜಲ್ಪುರ ತಾಲೂಕಿನ ದಿಕ್ಸಂಗಾ(ಕೆ)- ಮಾಶ್ಯಾಳ ರಸ್ತೆಯಲ್ಲಿ ನಡೆದಿದೆ. ಹತ್ಯೆಗೀಡಾದ ಯುವಕನನ್ನು ದಿಕ್ಸಂಗಾ(ಕೆ) ಗ್ರಾಮದ ಇಕ್ಬಾಲ್ ಎಂದು ಗುರುತಿಸಲಾಗಿದೆ. ಮದುವೆ ಆಹ್ವಾನ ಪತ್ರಿಕೆಗಳನ್ನು ಹಂಚಲು ಇಕ್ಬಾಲ್ ತನ್ನ ಸ್ನೇಹಿತ ಇರ್ಫಾನ್ ಜತೆ ಬೈಕ್ ಮೇಲೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಟಾಟಾ ಸುಮಾ ಡಿಕ್ಕಿ ಹೊಡೆಸಿದ್ದಾರೆ. ತಕ್ಷಣ ಇಬ್ಬರೂ ಆಯತಪ್ಪಿ ಬಿದ್ದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಇಕ್ಬಾಲ್ನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಅಫಜಲ್ಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕೆ.ರಾಜೇಂದ್ರ ಮತ್ತು ಸಬ್ ಇನ್ಸ್ಪೆಕ್ಟರ್ ಎಸ್.ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.