ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಮಗ್ರ ಅಭಿವೃದ್ಧಿ; ಬ್ಯಾಂಕ್ ಪಾತ್ರ ಮಹತ್ವದ್ದು- ಡಿಸಿ

Lingaraj Badiger
Updated On : 11 Jun 2013, 11:22 am

ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.10
ಬ್ಯಾಂಕುಗಳು ಜಿಲ್ಲೆಯ ಸರ್ವಾಂಗೀಣ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಜಿಲ್ಲಾ ವಾರ್ಷಿಕ ಸಾಲ ಪತ್ರದ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಎಲ್ಲ ಬ್ಯಾಂಕುಗಳು ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಕರೆ ನೀಡಿದರು.
ನಗರದ ಜಿಪಂ ಜಲನಿರ್ಮಲ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ವಾರ್ಷಿಕ ಸಾಲ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಜಿಲ್ಲೆಯಲ್ಲಿ ಕೃಷಿಯೇ ಪ್ರಧಾನ ಉದ್ಯಮವಾಗಿದ್ದು ಕೃಷಿಗೆ ಹೆಚ್ಚಿನ ಆದ್ಯತೆ ನೀಡುವತ್ತ ಬ್ಯಾಂಕುಗಳು ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಕೃಷಿ ಕ್ಷೇತ್ರಕ್ಕೆ ಮೊದಲಾದ್ಯತೆ ನೀಡುವುದು ಬ್ಯಾಂಕುಗಳ ಕರ್ತವ್ಯವಾಗಬೇಕು. ಅದರ ಜತೆಗೆ ಕೈಗಾರಿಕೆಗಳ ಸ್ಥಾಪನೆಗೂ ಅಗತ್ಯ ಹಣಕಾಸಿನ ನೆರವು ನೀಡಬೇಕು. ಪ್ರಸಕ್ತ ವರ್ಷ ಸಾಲ ಪತ್ರದಲ್ಲಿ ಶಿಕ್ಷಣ ಮತ್ತು ಗೃಹ ಸಾಲಕ್ಕೂ ಅವಕಾಶ ಕಲ್ಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶೈಕ್ಷಣಿಕ ಸಾಲದ ನೆರವು: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶೈಕ್ಷಣಿಕ ಸಾಲ ನೆರವಾಗಲಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅಗತ್ಯ ಸಂದರ್ಭದಲ್ಲಿ ತುರ್ತಾಗಿ ಸಾಲ ಒದಗಿಸುವ ಕಾರ್ಯ ಮಾಡಬೇಕಿದೆ. ಹಾಗೆ ಮಾಡದಿದ್ದಲ್ಲಿ ಬ್ಯಾಂಕುಗಳು ನೀಡುವ ಸಾಲದ ಮೂಲ ಉದ್ದೇಶಕ್ಕೆ ತೀವ್ರ ಹಿನ್ನಡೆಯಾಗಲಿದೆ ಎಂದು ಹೇಳಿದರು.
ಅನಗತ್ಯ ಗೊಂದಲ ಸರಿಯಲ್ಲ: ಬ್ಯಾಂಕುಗಳು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಲ ನೀಡುವ ವೇಳೆ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದು, ಫಲಾನುಭವಿಗಳ ಅಂತಿಮ ಪಟ್ಟಿಯನ್ನು ಆಡಳಿತ ಕಳಿಸಿದ್ದರೂ ಅದನ್ನು ಮಾನ್ಯ ಮಾಡದೇ ಬೇರೆ ರೀತಿಯಲ್ಲಿ ಮಾಹಿತಿ ಕೇಳುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣವಾಗುವ ಸಾಲಪತ್ರ ಯೋಜನೆಯ ಅಂಶಗಳನ್ನು ಬ್ಯಾಂಕ್ ಅಧಿಕಾರಿಗಳು ಪ್ರಾಮಾಣಿಕವಾಗಿ ಜಾರಿಗೆ ಮುಂದಾಗಬೇಕಿದೆ. ಅದರಿಂದ ಮಾತ್ರ ಸಮಗ್ರ ಪ್ರಗತಿ ಸಾಧ್ಯ. ಸಮಾಜದಲ್ಲಿ ಆರ್ಥಿಕ ದುಸ್ಥಿತಿಯಲ್ಲಿರುವವರಿಗೆ ನೆರನವಾಗುವ ಕಾರ್ಯ ಬ್ಯಾಂಕುಗಳು ಮಾಡಬೇಕಿದೆ ಎಂದು ಹೇಳಿದರು.
ಸಕಾಲಕ್ಕೆ ಸಾಲ ಮರುಪಾವತಿಸಿ: ಸಾಲ ಮರುಪಾವತಿಯ ವಿಚಾರದಲ್ಲಿ ಸಾರ್ವಜನಿಕರೂ ಬ್ಯಾಂಕುಗಳಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು, ಸಾಲ ನೀಡಿಕೆಗೆ ಅಧಿಕಾರಿಗಳು ವಿಳಂಬ ಮಾಡಿದರೆ ಸಾಲ ಮರುಪಾವತಿಗೆ ಸಾಲ ಪಡೆದವರೂ ವಿಳಂಬ ಮಾಡುವುದು ಸಹಜ ಮನೋಭಾವವಾಗಿದೆ ಎಂದು ಎಚ್ಚರಿಸಿದರು.
ಜಿಪಂ ಉಪ ಕಾರ್ಯದರ್ಶಿ ಎಂಡಿ ಯುಸೂಫ್ ಮಾತನಾಡಿ, ಗ್ರಾಹಕ ಸ್ವೇಹಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಮಾತ್ರ ಸಾಲ ವಸೂಲಾತಿಗೆ ಪೂರಕ ಪರಿಸರ ನಿರ್ಮಾಣ ಸಾಧ್ಯ. ಕೃಷಿ ಕ್ಷೇತ್ರಕ್ಕೆ ಬ್ಯಾಂಕುಗಳು ಮೊದಲಾದ್ಯತೆ ನೀಡಬೇಕು. ಎಸ್‌ಜೆಎಸ್‌ಆರ್‌ವೈ ಯೋಜನೆ ಅಡಿ ನೀಡುವ ಆರ್ಥಿಕ ನೆರವಿನ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಬ್ಯಾಂಕು ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಹೇಳಿದರು.
ಸಮನ್ವಯದ ಕೊರತೆ: ಆರ್‌ಬಿಐ ಎಜಿಎಂ ಶ್ರೀನಿವಾಸ್ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಬ್ಯಾಂಕುಗಳ ಮಧ್ಯೆ ಸಮನ್ವಯದ ಕೊರತೆಯಿದ್ದು ಅದನ್ನು ಸರಿಪಡಿಸುವ ಮೂಲಕ ಸಾಲ ನೀಡಿಕೆ ಮತ್ತು ಮರುಪಾವತಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಗ್ರಣಿ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಎಸ್. ಶೇಖರಗೌಡ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಎನ್.ನಾರಾಯಣರಾಜು, ಎಸ್ ಬಿಎಚ್ ಎಜಿಎಂ ಆರ್.ಜಿ.ಹೆಬ್ಬಾಳಕರ್ ಮತ್ತಿತರರು ಇದ್ದರು. ವಿವಿಧ ಬ್ಯಾಂಕುಗಳು ಅಧಿಕಾರಿಗಳು ಪಾಲ್ಗೊಂಡಿದ್ದರು.


ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ
ರಾಯಚೂರು: 2013-14ನೇ ಸಾಲಿನ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಬಿಡುಗಡೆಗೊಳಿಸಿರುವ ಅಗ್ರಣಿ ಬ್ಯಾಂಕ್ ಎಸ್ ಬಿಎಚ್, 1764.17 ಲಕ್ಷ ಗುರಿ ನಿಗದಿಗೊಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ.20.98 ರಷ್ಟು ಹೆಚ್ಚಳವಾಗಿದೆ.
ನಗರದ ಜಿಪಂ.ನ ಜಲನಿರ್ಮಲ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಬಿಡುಗಡೆಗೊಳಿಸಿದ ಜಿಲ್ಲಾ ವಾರ್ಷಿಕ ಸಾಲ ಯೋಜನೆಯ ಪ್ರಮುಖಾಂಶಗಳು ಇಂತಿವೆ. ಪ್ರಸಕ್ತ ವರ್ಷಕ್ಕೆ ಒಟ್ಟು 1764.17 ಲಕ್ಷ ಗುರಿ ನಿಗದಿ ಮಾಡಲಾಗಿದೆ. ಕಳೆದ ವರ್ಷ ಈ ಗುರಿ 370.12 ಲಕ್ಷ  ಆಗಿತ್ತು. ಕೃಷಿಗೆ 160892 ಲಕ್ಷ, ಕೃಷಿಯೇತರ ಕ್ಷೇತ್ರಕ್ಕೆ 31823 ಲಕ್ಷ ಹಾಗೂ ಇನ್ನಿತರೆ ಕ್ಷೇತ್ರಕ್ಕೆ 20714 ಲಕ್ಷ ಗುರಿಯಿರಿಸಲಾಗಿದೆ. ದೇವದುರ್ಗ ತಾಲೂಕಿಗೆ ಪ್ರಸಕ್ತ ಸಾಲ ಯೋಜನೆ ಅಡಿ 14391 ಲಕ್ಷ, ಲಿಂಗಸ್ಗೂರು ತಾಲೂಕಿಗೆ 28008 ಲಕ್ಷ, ಮಾನವಿ ತಾಲೂಕಿಗೆ 43280 ಲಕ್ಷ, ರಾಯಚೂರು ತಾಲೂಕಿಗೆ 56852 ಲಕ್ಷ, ಸಿಂಧನೂರು ತಾಲೂಕಿಗೆ 70898 ಲಕ್ಷ ಗುರಿ ಹಂಚಿಕೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement