ಅಂಗನವಾಡಿ, ಶಾಲೆಗಳಿಗೆ ಕುಡಿವ ನೀರಿನ ಸೌಲಭ್ಯ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.11
ತಾಲೂಕಿನ 6 ಪ್ರೌಢಶಾಲೆ, 45 ಪ್ರಾಥಮಿಕ ಶಾಲೆ ಮತ್ತು 84 ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸರ್ಕಾರ ನಿರ್ದೇಶನ ನೀಡಿದ್ದು, ಈ ಎಲ್ಲ ಕಾಮಗಾರಿಗಳ ಅಂದಾಜು ಪತ್ರಿಕೆಯನ್ನು ತಯಾರಿಸಿ ಅನುಮತಿಗಾಗಿ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಪಂಚಾಯತ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಆರ್. ಗೌಡೂರು ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು ತಾಲೂಕಿನ 292 ಶಾಲೆಗಳ ಪೈಕಿ ತಮ್ಮ ಇಲಾಖೆಯಿಂದ 51 ಶಾಲೆಗಳಿಗೆ ಸೌಕರ್ಯ ಕಲ್ಪಿಸಲಾಗುತ್ತಿದೆ. ಇನ್ನುಳಿದ ಶಾಲೆಗಳಿಗೆ ಇಲಾಖೆಯಿಂದಲೇ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.
ಜಾಗದ ಸಮಸ್ಯೆ: ಕಳೆದ ವರ್ಷ 148 ಅಂಗನವಾಡಿ ಕೇಂದ್ರಗಳಿಗೆ ನೀರಿನ ಸೌಲಭ್ಯಕ್ಕಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 130 ಕಾಮಗಾರಿಗಳು ಪೂರ್ಣಗೊಂಡಿವೆ. ಜಾಗದ ಅಭಾವದಿಂದ ಇನ್ನುಳಿದ ಅಂಗನವಾಡಿ ಕೇಂದ್ರಗಳಲ್ಲಿ ಸೌಲಭ್ಯ ಕಲ್ಪಿಸಲಾಗಿಲ್ಲ. ಹಾಗೆಯೇ ಕೈಗೆತ್ತಿಕೊಂಡ 34 ಶಾಲೆಗಳಲ್ಲಿ 32 ಶಾಲೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿಲ್ಲ. ಹಾಗೆಯೇ ಹೊಸದಾಗಿ ರಾಷ್ಟ್ರೀಯ ಗ್ರಾಮೀಣ ಕುಡಿವ ನೀರಿನ ಯೋಜನೆಯಲ್ಲಿ 36 ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದು ಅವುಗಳ ವಿವರಗಳನ್ನು ಸಹ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
156 ಗ್ರಾಮಗಳಿಗೆ ಶುದ್ಧ ನೀರು: ರಾಜೀವಗಾಂಧಿ ಸಬ್ ಮಿಷನ್ ಯೋಜನೆಯಡಿ ತಾಲೂಕಿಗೆ 156 ಗ್ರಾಮಗಳಿಗೆ ಶುದ್ಧ ಕುಡಿವ ನೀರಿನ ಸೌಲಭ್ಯ ಕಲ್ಪಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು. ದಢೇಸೂಗೂರು ನೀರು ಸರಬರಾಜು ಕೇಂದ್ರದಿಂದ 18 ಹಳ್ಳಿಗಳಿಗೆ, ತುರ್ವಿಹಾಳ ಕೇಂದ್ರದಿಂದ 34 ಹಳ್ಳಿಗಳಿಗೆ, ಭೋಗಾಪುರ ಭಾಗ 1ರಿಂದ 11 ಹಳ್ಳಿಗಳಿಗೆ, ಹುಲ್ಲೂರು ಕೇಂದ್ರದಿಂದ 6, ಕುರುಕುಂದಾ ಕೇಂದ್ರದಿಂದ 27, ಜವಳಗೇರಾ ಕೇಂದ್ರದಿಂದ 26, ಗೊರೇಬಾಳ ಕೇಂದ್ರದ 8, ತಿಪ್ಪನಹಟ್ಟಿ ಕೇಂದ್ರದಿಂದ 19, ಬುದ್ದಿನ್ನಿ ಕೇಂದ್ರದಿಂದ 8 ಹಳ್ಳಿಗಳಿಗೆ ಹೀಗೆ ಒಟ್ಟು 156 ಗ್ರಾಮಗಳಿಗೆ ರಾಜೀವಗಾಂಧಿ ಸಬ್ ಮಿಷನ್ ಯೋಜನೆಯಿಂದ ಶುದ್ಧ ಕುಡಿವ ನೀರಿನ ಸೌಲಭ್ಯ ದೊರೆಯಲಿದೆ ಎಂದು ವಿವರಿಸಿದರು.
11 ಕಡೆಗಳಲ್ಲಿ ಕಾಮಗಾರಿ ಆರಂಭ: ಈಗಾಗಲೇ 11 ಕಡೆಗಳಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು ಅವುಗಳಲ್ಲಿ ಗೊರೇಬಾಳ, ದಢೇಸೂಗೂರು, ಭೋಗಾಪುರ ಮತ್ತು ತುರ್ವಿಹಾಳ ಕೇಂದ್ರಗಳ ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಾಯೋಗಿಕವಾಗಿ ನೀರಿನ ಸರಬರಾಜು ಕಾರ್ಯ ಸಹ ನಡೆದಿದೆ. ಇನ್ನುಳಿದ ಆರ್.ಎಚ್. ಕ್ಯಾಂಪ್, ತಿಪ್ಪನಹಟ್ಟಿ, ಹುಲ್ಲೂರು, ಕುರುಕುಂದಾ, ಭೋಗಾಪುರ ಭಾಗ 1 ಮತ್ತು 2, ಮುಕ್ಕುಂದಾ, ಬುದ್ದಿನ್ನಿ, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಬಿ.ಆರ್. ಗೌಡೂರು ವಿವರಿಸಿದರು.