ಕಾಮಗಾರಿ ಕಳಪೆ; ಕ್ರಮಕ್ಕೆ ಆಗ್ರಹ
ದೇವದುರ್ಗ: ತಾಲೂಕಿನ ಮಸರಕಲ್ ಗ್ರಾಮದ ಮುರುಘೇಂದ್ರ ಸರ್ಕಾರಿ ಪ್ರೌಢ ಶಾಲೆಗೆ ನಿರ್ಮಿಸುತ್ತಿರುವ ಆವರಣ ಗೋಡೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಗ್ರಾಮದ ಮುಖಂಡ ಹಾಜಿಸಾಬ್ ಮುಲ್ಲಾ ಒತ್ತಾಯಿಸಿದ್ದಾರೆ.
ಅವರು ಈ ಕುರಿತು ಡಿಡಿಪಿಐ ಅವರಿಗೆ ದೂರು ಸಲ್ಲಿಸಿದ್ದು, ಕಾಮಗಾರಿಯನ್ನು ಸ್ಥಳೀಯ ರಾಜಕೀಯ ಮುಖಂಡರು ಕೈಗೆತ್ತಿಕೊಂಡಿದ್ದು, ಕಾಮಗಾರಿಯ ಅಡಿಪಾಯದಲ್ಲಿ ಕಾಂಕ್ರೀಟ್ ಬಳಸದೇ ಕೇವಲ ಮಣ್ಣು ಹಾಕಿ ಮುಚ್ಚಿ ನಂತರ ಗೋಡೆ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದು, ಅದರಿಂದ ಆವರಣ ಗೋಡೆ ಕುಸಿಯುವ ಸಾಧ್ಯತೆಯಿದೆ. ಈ ಬಗ್ಗೆ ಗ್ರಾಮಸ್ಥರು ಮತ್ತು ಶಾಲೆಯ ಮುಖ್ಯಗುರುಗಳು ಆಕ್ಷೇಪಿಸಿದರೂ ಕಾಮಗಾರಿ ಮುಂದುವರಿಸಲಾಗಿದೆ. ಕಾರಣ ಕೂಡಲೇ ಕಾಮಗಾರಿಯನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.