ಆರ್ಟಿಇಗೆ ತಾತ್ಸಾರ; ಶಾಲೆಗಳಿಗೆ ನೋಟಿಸ್
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.12
ಸರ್ಕಾರದಿಂದ ಅನುದಾನ ಪಡೆದರೂ ಸರ್ಕಾರದ ಸೂಚನೆ ಪಾಲಿಸದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಲು ಜಿಲ್ಲಾಡಳಿತ ಮುಂದಾಗಿದೆ. ಸರ್ಕಾರದ ಶಿಕ್ಷಣ ಹಕ್ಕು ಕಾಯಿದೆ ಅಡಿ ಶೇ.25ರಷ್ಟು ಪ್ರವೇಶ ನೀಡಲು ನಿರ್ಲಕ್ಷಿಸಿದ ಜಿಲ್ಲೆಯ ಮೂರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಜಿಪಂ ಅಂತಿಮ ಎಚ್ಚರಿಕೆ ನೀಡಲು ನಿರ್ಧರಿಸಿದೆ.
ಜಿಲ್ಲೆಯಲ್ಲಿ ಈಗಾಗಲೇ ಒಂದನೇ ತರಗತಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡು, ಶಾಲೆಗಳು ಕಾರ್ಯಾರಂಭ ಮಾಡಿವೆ. ಆದರೆ ಸರ್ಕಾರದ ಕಾಯಿದೆಯಂತೆ ಶೇ.25ರಷ್ಟು ಸೀಟುಗಳಿಗೆ ಉಚಿತ ಮತ್ತು ಕಡ್ಡಾಯವಾಗಿ ಬಡವರಿಗೆ ಪ್ರವೇಶ ನೀಡುವಂತೆ ಶಿಕ್ಷಣ ಇಲಾಖೆಯ ಸೂಚನೆಗೆ ಕಿಮ್ಮತ್ತು ನೀಡದ ಸಂಸ್ಥೆಗಳು ಈಗ ಆಡಳಿತದ ಕೆಂಗಣ್ಣಿಗೆ ಗುರಿಯಾಗಿವೆ.
ಜಿಲ್ಲಾಡಳಿತಕ್ಕೆ ಪಾಲಕರಿಂದ ದೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಿಂದಲೂ ಶಿಕ್ಷಣ ಹಕ್ಕು ಕಾಯಿದೆಯಂತೆ ಪ್ರವೇಶ ನೀಡಲು ನಿರ್ಲಕ್ಷ್ಯ ತೋರುತ್ತಲೇ ಬಂದಿದ್ದ ನಗರದ ಸೇಂಟ್ ಮೇರಿಸ್ ಕಾನ್ವೆಂಟ್, ಸಿಂಧನೂರಿನ ದುದ್ದುಪಡಿ ಶಾಲೆ ಮತ್ತು ಡೆಫೊಡೆಲ್ ಶಾಲೆಗಳಿಗೆ ಆಯಾ ತಾಲೂಕುಗಳ ಬಿಇಒಗಳು ನಿರಂತರವಾಗಿ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ.
ಕಳೆದ ವಾರ ಅಂತಿಮವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ ಅವರೂ ಎಚ್ಚರಿಕೆಯ ನೋಟಿಸ್ ನೀಡಿದ್ದರು. ಆದರೆ ಈ ಮೂರು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಪ್ರವೇಶ ಕಲ್ಪಿಸುವಲ್ಲಿ ಅಸಡ್ಡೆ ತೋರಿ ಪ್ರವೇಶಕ್ಕೆ ನಿರಾಕರಿಸಿದ್ದರಿಂದ ಜಿಲ್ಲಾಡಳಿತಕ್ಕೆ ಪಾಲಕರಿಂದ ದೂರು ಕೇಳಿಬಂದಿದ್ದವು.
ಅಂತಿಮ ನೋಟಿಸ್ ಜಾರಿ: ಈ ನಿಟ್ಟಿನಲ್ಲಿ ಡಿಡಿಪಿಐ ಅವರು ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಸಿಇಒ ಜ್ಞಾನಪ್ರಕಾಶ್ ಅವರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶದ ಸಮರ್ಪಕ ಜಾರಿಗೆ ತೋರುತ್ತಿರುವ ತಾತ್ಸಾರ ಮನೋಭಾವದ ಬಗ್ಗೆ ಗಮನಕ್ಕೆ ತಂದಿದ್ದರು. ಆ ಹಿನ್ನೆಲೆಯಲ್ಲಿ ಜಿಪಂ ಸಿಇಒ ಜ್ಞಾನಪ್ರಕಾಶ್ ಅವರು ನಗರದ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಗೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಸಿಂಧನೂರಿನ ಡೆಫೊಡೆಲ್ ಮತ್ತು ದುದ್ದುಪುಡಿ ಶಾಲೆಗೂ ನೋಟಿಸ್ ಜಾರಿ ಮಾಡಲಿದ್ದಾರೆ.
ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಜಿಪಂ ಸಿಇಒ ಜ್ಞಾನಪ್ರಕಾಶ್ ಅವರು, ಸರ್ಕಾರದ ಆದೇಶದ ಪಾಲನೆಗೆ ತಾತ್ಸಾರ ತೋರಿದ ರಾಯಚೂರಿನ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆ, ಸಿಂಧನೂರಿನ ದುದ್ದುಪುಡಿ ಶಾಲೆ ಮತ್ತು ಡೆಫೊಡೆಲ್ ಶಾಲೆಗಳ ಆಡಳಿತ ಮಂಡಳಿಗೆ ಅಂತಿಮ ಎಚ್ಚರಿಕೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಂತಿಮ ಎಚ್ಚರಿಕೆ ನೋಟಿಸ್ಗೆ ಶಾಲೆಯ ಆಡಳಿತ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಶಾಲೆಗಳಿಗೆ ಸರ್ಕಾರದ ಅನುದಾನ ಕಡಿತಗೊಳಿಸಲು ಶಿಫಾರಸು ಮಾಡಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಒಂದೆಡೆ ಸರ್ಕಾರ ಅನುದಾನಿತ ಶಾಲೆಗಳಲ್ಲಿ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಲು ಆದೇಶಿಸುತ್ತದೆ. ಆದರೆ ಅದೇ ಮತ್ತೊಂದೆಡೆ ಸಂಸ್ಥೆಗಳು ರಾಜಕೀಯ ಬೆಂಬಲದೊಂದಿಗೆ ಸರ್ಕಾರದ ಸೂಚನೆ ಪಾಲನೆಯಾಗದಂತೆ ಮಾಡುತ್ತವೆ. ಸದ್ಯ ಜಿಪಂ ಸಿಇಒ ಅಂತಿಮವಾಗಿ ಎಚ್ಚರಿಕೆ ನೀಡಿದ್ದಾರೆ. ಶಾಲೆಯ ಆಡಳಿತ ಮಂಡಳಿಗಳು ಯಾವ ರೀತಿ ಎಚ್ಚರಿಕೆಗೆ ಸ್ಪಂದಿಸಲಿವೆ ಎಂಬುದು ಸದ್ಯದ ಪ್ರಶ್ನೆ.
ಮುಚ್ಚಿದ ನೆಮ್ಮದಿ ಕೇಂದ್ರ; ವಿದ್ಯಾರ್ಥಿಗಳ ಪರದಾಟ
ರಾಯಚೂರು: ತಾಲೂಕಿನ ಕಲ್ಮಲಾ ಗ್ರಾಮದ ನೆಮ್ಮದಿ ಕೇಂದ್ರವು ಕಳೆದ ಕೆಲ ದಿನಗಳಿಂದ ಮುಚ್ಚಿದ್ದು, ಕಲ್ಮಲಾ ಸೇರಿದಂತೆ ಸುತ್ತಲಿನ ಗ್ರಾಮಗಳ ಜನತೆ ವಿವಿಧ ದಾಖಲೆಗಳನ್ನು ಪಡೆಯಲು ಪರದಾಡುವಂತಾಗಿದೆ.
ನೆಮ್ಮದಿ ಕೇಂದ್ರಕ್ಕೆ ನೀಡಲಾಗಿದ್ದ ಬಿಎಸ್ಸೆನ್ನೆಲ್ ಸಂಪರ್ಕದ ಕೇಬಲ್ನಲ್ಲಿ ದೋಷ ಕಂಡುಬಂದಿದ್ದು, ಅದರಿಂದ ಕೇಂದ್ರದ ಒಟ್ಟಾರೆ ಕಾರ್ಯ ನಿರ್ವಹಣೆ ಸ್ಥಗಿತಗೊಂಡಿದ್ದರಿಂದ ಕಲ್ಮಾಲ ಸೇರಿ ಅದರ ಸುತ್ತಲಿನ ಸುಮಾರು 30ಕ್ಕೂ ಹೆಚ್ಚಿನ ಗ್ರಾಮಗಳ ಜನತೆಗೆ ತೊಂದರೆಯಾಗಿದೆ.
ಅದರಲ್ಲೂ ಸದ್ಯ ಶಾಲಾ-ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಜಾರಿಯಲ್ಲಿದ್ದು, ವಿದ್ಯಾರ್ಥಿಗಳಿಗೆ ವಿವಿಧ ಪ್ರಮಾಣ ಪತ್ರಗಳ ಅವಶ್ಯಕತೆಯಿದೆ. ಆದರೆ ನೆಮ್ಮದಿ ಕೇಂದ್ರದಲ್ಲಿ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಾರಣ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನೆಮ್ಮದಿ ಕೇಂದ್ರ ಪುನಾ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.