ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಡೆಂಘೀ ನಿಯಂತ್ರಣಕ್ಕೆ ಶುಚಿತ್ವವೇ ಮದ್ದು'

Lingaraj Badiger
Updated On : 13 Jun 2013, 10:48 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.12
ಡೆಂಘೀ ಹಾಗೂ ಇತರ ಮಾರಕ ಸಾಂಕ್ರಾಮಿಕ ರೋಗಗಳ ಹತೋಟಿಗೆ ಇಲಾಖೆಗಳ ಜೊತೆಗೆ ಸಮುದಾಯವು ಸಕ್ರಿಯವಾಗಿ ಭಾಗವಹಿಸಬೇಕು. ಸುತ್ತಲಿನ ಪರಿಸರವನ್ನು ಶುಚಿತ್ವವಾಗಿ ಇಡಲು ಪಣ ತೊಟ್ಟರೆ ರೋಗಗಳ ನಿಯಂತ್ರಣ ಸಾಧ್ಯ ಎಂದು ಬಾದರ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ವಿಶ್ವನಾಥ ಜಾಧವ ಹೇಳಿದರು.
ತಾಲೂಕಿನ ಗೋಮರ್ಸಿಯಲ್ಲಿ ಶಂಕಿತ ಡೆಂಘೀ ಜ್ವರ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರು ಗಾಬರಿಯಾಗುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡ ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷಾ ತಂಡದ ಕಾರ್ಯ ನಡೆಯುತ್ತಿದೆ. ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಮತ್ತು ಗ್ರಾಮದಲ್ಲಿ ಫಾಗಿಂಗ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ರೋಗದ ಲಕ್ಷಣ: ಈ ರೋಗವು ಈಜಿಪ್ಟ್ ಇಡಿಪ್ಟೈ ಎಂಬ ಸೊಳ್ಳೆ ಹಗಲು ವೇಳೆ ಕಚ್ಚುವುದರಿಂದ ಹರಡುತ್ತದೆ. ನಂತರ ವ್ಯಕ್ತಿಯಲ್ಲಿ ತೆಲೆನೋವು, ಜ್ವರ, ಕಣ್ಣುಗಳ ಹಿಂಭಾಗದಲ್ಲಿ ಸೇದುವಿಕೆ, ಕೀಲುಗಳಲ್ಲಿ ನೋವು, ವಾಂತಿ ಕಂಡುಬರುತ್ತದೆ. ಒಂದು ವೇಳೆ ಈ ಹಂತದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ ಹಾಗೂ ನಿರ್ಲಕ್ಷಿಸಿದಲ್ಲಿ ರಕ್ತದಲ್ಲಿನ ಪ್ಲೇಟಲೆಟ್ಸ್ ಕಡಿಮೆಯಾಗಿ ಮೂಗು, ವಸಡು ಹಾಗೂ ದೇಹದ ಇತರ ಭಾಗಗಳಿಂದ ರಕ್ತ ವಸರುತ್ತದೆ. ಈ ಲಕ್ಷಣಗಳಾಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಜ್ವರ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು.
ನೀರು ಸಂಗ್ರಹಕ ಶುಚಿಗೊಳಿಸಿ: ಗ್ರಾಮದ ಪ್ರತಿ ಕುಟುಂಬದವರು ತಮ್ಮ ಮನೆಯ ಆವರಣದಲ್ಲಿ ಬಳಕೆಗಾಗಿ ನೀರು ತುಂಬುವ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿ, ಮಡಿಕೆ, ಇತರ ನೀರು ಸಂಗ್ರಹಕಗಳನ್ನು ವಾರಕ್ಕೊಮ್ಮೆಯಾದರೂ ಚೆನ್ನಾಗಿ ತಿಕ್ಕಿ ತೊಳೆದು ಒಳಭಾಗದಲ್ಲಿ ಸುಣ್ಣವನ್ನು ಹಚ್ಚಿ ತುಂಬಿಸಬೇಕು. ಮುಚ್ಚಳನ್ನು ಮುಚ್ಚುವುದರಿಂದ ಸೊಳ್ಳೆ ಮೊಟ್ಟೆಯನ್ನು ಇಡಲು ನಂತರ ಅದರ ಮರಿ(ಲಾರ್ವಾ) ನಾಶವಾಗುವುದರ ಜೊತೆಗೆ ರೋಗ ನಿಯಂತ್ರಣ ಸಾಧ್ಯವೆಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ ವಿವರಿಸಿದರು.
ಈ ವೇಳೆ ಗ್ರಾಪಂ ಸದಸ್ಯ ಜಿಲಾನಿಪಾಷ ಮಾತನಾಡಿದರು. ಮಲೇರಿಯಾ ಮೇಲ್ವಿಚಾರಕ ಎಫ್.ಎ. ಹಣಿಗಿ, ಜ್ಯೋತಿ ಪಾಟೀಲ, ಎ.ಐ. ಪಾಟೀಲ್, ಪವನ ದೇಸಾಯಿ, ಮಂಜುನಾಥ, ಮಲ್ಲಪ್ಪ, ರೇಣುಕಾ, ತಹಸೀನ ಬಾನು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ರೋಷನ ಬೀ, ಆಶಾ, ರೇಣುಕಾ, ಅಂಗನವಾಡಿ ಕಾರ್ಯಕರ್ತೆ ಪಾರ್ವತಿ, ಅರೀಪಾ ಸೇರಿದಂತೆ ಸ್ಥಳಿಯ ಗ್ರಾಮಸ್ಥರು, ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement