ಬಾಲಕಾರ್ಮಿಕ ಪದ್ಧತಿ ದೇಶಕ್ಕೆ ಮಾರಕ: ಸತೀಶ ಸಿಂಗ್
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.12
ಬಾಲಕಾರ್ಮಿಕ ಪದ್ಧತಿ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಗ್ರಾಮೀಣ ಭಾಗದಲ್ಲಿಯೂ ಈ ಪದ್ಧತಿ ವ್ಯಾಪಕವಾಗಿದ್ದು, ಅದರ ನಿರ್ಮೂಲನೆಗೆ ಎಲ್ಲ ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಪಂ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಮತ್ತು ಬಾಲಕಾರ್ಮಿಕ ಶಾಲೆಗಳನ್ನು ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾಹಿತಿಗೆ ಸೂಚನೆ: 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕಿಟ್ಟುಕೊಳ್ಳುವುದಿಲ್ಲ ಬಾಲಕಾರ್ಮಿಕ ನಿವಾರಣೆಗೆ ಬದ್ಧನಾಗಿದ್ದೇನೆ ಎಂಬ ಪ್ರತಿಜ್ಞೆ ಸ್ವೀಕರಿಸುವ ಕಾರ್ಯವಷ್ಟೇ ಆಗಬಾರದು. ಬದಲಿಗೆ ಎಲ್ಲರೂ ಸಮಾಜದಿಂದಲೇ ಬಾಲಕಾರ್ಮಿಕ ಪದ್ಧತಿ ತೊಡೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ಬಾಲಕಾರ್ಮಿಕ ಪದ್ಧತಿ ನಿವಾರಣೆಗೆ ಒಳಗೊಂಡಿರುವ 22 ಇಲಾಖೆ ಅಧಿಕಾರಿಗಳ ದೂರವಾಣಿ ಸಂಖ್ಯೆಯುಳ್ಳ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ದೂರವಾಣಿ ಮಾಹಿತಿಯನ್ನು ಎಲ್ಲಾ ಇಲಾಖೆಗಳಲ್ಲಿ ಅಧಿಕಾರಿಗಳು ಸಾರ್ವಜನಿಕರ ಮಾಹಿತಿಗೆ ಲಗತ್ತಿಸುವಂತೆ ಸೂಚಿಸಿದರು.
ಕಠಿಣ ಕ್ರಮ: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜಾಗೃತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಈಗಲೂ ಜಿಲ್ಲೆಯ ಅನೇಕ ಕಡೆ ಬಾಲಕಾರ್ಮಿಕ ಪದ್ಧತಿ ಜಾರಿಯಲ್ಲಿರುವುದು ನಾಗರಿಕ ಸಮಾಜವು ತಲೆತಗ್ಗಿಸುವಂಥ ಸಂಗತಿಯಾಗಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಬಾಲಕಾರ್ಮಿಕರ ನೇಮಕದ ವಿಚಾರ ಕಂಡುಬಂದಲ್ಲಿ ಕೂಡಲೇ ಅವರನ್ನು ಮುಕ್ತಗೊಳಿಸಲು ಕ್ರಮ ಜರುಗಿಸುವಂತೆ ಸೂಚಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಅನಿಷ್ಟ ಪದ್ಧತಿ ತೊಡೆಯಲು ಮುಂದಾಗಬೇಕು. ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಅಧಿಕಾರಿ ಅಥವಾ ನೌಕರರು ಮಕ್ಕಳನ್ನು ಕೆಲಸಕ್ಕೆ ಇರಿಸಿಕೊಂಡಿದ್ದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಸಿಇಒ ಜ್ಞಾನಪ್ರಕಾಶ್, ಎಎಸ್ಪಿ ಡಾ. ದಿವ್ಯಾ ಗೋಪಿನಾಥ್, ಡಿಡಿಪಿಐ ಪರಮೇಶ್ವರ, ಯುನಿಸೆಫ್ ಸಂಯೋಜಕ ರಾಘವೇಂದ್ರ ಭಟ್, ಬಿಇಒ ಮಲ್ಲಿಕಾರ್ಜುನ, ಎಇಇ ವೆಂಕಟೇಶ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈ ವೇಳೆ ನಗರದ ವಿವಿಧೆಡೆಯಿಂದ ಆಗಮಿಸಿದ್ದ ಶಾಲಾ ಮಕ್ಕಳು ಜಾಗೃತಿ ಮೂಡಿಸುವ ಭಿತ್ತಿಪತ್ರ ಹಿಡಿದು ಘೋಷಣೆ ಕೂಗುತ್ತಾ ಜಾಥಾದಲ್ಲಿ ಪಾಲ್ಗೊಂಡಿದ್ದರು.
ದೇವದುರ್ಗ; ತಾಲೂಕು ಆಡಳಿತದಿಂದ...
ದೇವದುರ್ಗ: ಪಟ್ಟಣದಲ್ಲಿ ಬುಧವಾರ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಬುಧವಾರ ತಾಲೂಕು ಆಡಳಿತದಿಂದ ಆಚರಿಸಲಾಯಿತು.
ತಹಸೀಲ್ದಾರ್ ತುಕಾರಾಮ ಕಲ್ಯಾಣಕರ್ ಅವರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ, ಖಾಸಗಿ ಶಾಲೆಗಳ ಮಕ್ಕಳಿಂದ ಪ್ರಮುಖ ಬೀದಿಗಳಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿಸಿ ಜಾಗೃತಿ ಜಾಥಾ ನಡೆಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್, ಜಿ. ಶರಣಪ್ಪ, ಶರಣಬಸವ, ಪುರಸಭೆಯ ಅಧಿಕಾರಿ ಗೋಪಾಲರಾವ್, ಕನ್ನಡ ರಕ್ಷಣಾ ವೇದಿಕೆಯ ನಗರ ಘಟಕ ಅಧ್ಯಕ್ಷ ಶಿವುಕುಮಾರ ಚಲವಾದಿ ಹಾಗೂ ಬಿಜೆಪಿ ಮುಖಂಡ ಎಚ್. ಶಿವರಾಜ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.