ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿದ್ಯಾವಂತರಿಂದಲೇ ಬಾಲಕರ ದುಡಿಮೆ

Lingaraj Badiger
Updated On : 13 Jun 2013, 10:52 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.12
ದೇಶದಲ್ಲಿ ಬಹುತೇಕ ವಿದ್ಯಾವಂತರೇ ಬಾಲಕಾರ್ಮಿಕರನ್ನು ಹೆಚ್ಚು ದುಡಿಸಿಕೊಳ್ಳುತ್ತಿದ್ದಾರೆ ಎಂದು ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಆರ್.ಜೆ. ಸತೀಶಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇತರೆ ಎಲ್ಲ ಇಲಾಖೆ ಮತ್ತು ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ, ಕಾನೂನು ಸಾಕ್ಷರತಾ ರಥ, ಸಂಚಾರಿ ನ್ಯಾಯಾಲಯ ಮತ್ತು ಕಾನೂನು ಅರಿವು- ನೆರವು ಕಾರ್ಯಕ್ರಮಗಳನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರಿಗಳ ಮನೆಯಲ್ಲೇ ದುಡಿಮೆ: ಅವಿದ್ಯಾವಂತರು ತಪ್ಪು ಮಾಡುವುದು ಸಹಜ. ಆದರೆ ವಿದ್ಯಾವಂತರೇ ತಪ್ಪು ಮಾಡಿದರೆ ಕ್ಷಮೆಗೆ ಅರ್ಹವಲ್ಲ. ಐಎಎಸ್, ಐಪಿಎಸ್, ತಹಸೀಲ್ದಾರ್ ಮತ್ತಿತರ ಮೇಲ್ವರ್ಗದ ಅಧಿಕಾರಿಗಳೇ ತಮ್ಮ ಮನೆಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವುದರನ್ನು ಕಾಣುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.
ಇಂದು ಬಾಲಕಾರ್ಮಿಕ ದಿನಾಚರಣೆ ಇದೆ. ಕೇವಲ ಇಂದು ಮಾತ್ರ ಬಾಲಕಾರ್ಮಿಕರ ಬಗ್ಗೆ ಮಾತನಾಡಿದರೆ ಸಾಲದು. ಅನೇಕ ಪ್ರಕರಣಗಳಲ್ಲಿ ಬಾಲ ಕಾರ್ಮಿಕರೇ ಅಪರಾಧಿಗಳಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಬಾಲಕಾರ್ಮಿಕರ ಪಿಡುಗನ್ನು ಕಡಿಮೆ ಮಾಡಬೇಕೆಂದರೆ ಅವರಿಗೆ ಶಿಕ್ಷಣ ಕೊಡುವುದು ಅಗತ್ಯ. ಶಿಕ್ಷಣದಿಂದ ನೈತಿಕತೆಯ ಆಧಾರದ ಮೇಲೆ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ. ಇದರಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದೆ ಎಂದು ವಿವರಿಸಿದರು.
ಆರ್‌ಟಿಐ ಜಾರಿಯಿಂದ ನಡುಕ: ಹಿರಿಯ ನ್ಯಾಯವಾದಿ ಟಿ.ರಾಜಶೇಖರಯ್ಯ ಮಾಹಿತಿ ಹಕ್ಕು ಮತ್ತು ಆಸ್ತಿಯ ಹಕ್ಕುಗಳ ಬಗ್ಗೆ ಮಾತನಾಡಿ, ಕಾನೂನು ಎಂಬುದು ಸಾಮಾನ್ಯ ಜ್ಞಾನ. ಮಾಹಿತಿ ಹಕ್ಕು ಕಾಯ್ದೆ 2005ರಲ್ಲಿ ಜಾರಿಯಾದ ಮೇಲೆ ಅಧಿಕಾರಿಗಳಲ್ಲಿ ನಡುಕ ಉಂಟಾಗಿದೆ. ಮಾಹಿತಿ ಹಕ್ಕಿನಲ್ಲಿ ದೇಶದ ಐಕ್ಯತೆ, ಸೈನ್ಯದ ವಿಷಯ, ಗುಪ್ತಚರ ಇಲಾಖೆಯ ವಿಷಯಗಳನ್ನು ಹೊರತುಪಡಿಸಿ ಎಲ್ಲ ಮಾಹಿತಿಗಳನ್ನು ಕೇಳಬಹುದಾಗಿದೆ. ಆಸ್ತಿ ಮಾಡುವುದು ಮುಖ್ಯವಲ್ಲ. ಆಸ್ತಿ ಕಾನೂನು ಪ್ರಕಾರ ಖರೀದಿಸಲು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಿ ಕೊಂಡುಕೊಂಡರೆ ಕೊಂಡವರು ಕ್ಷೇಮದಿಂದ ಇರುತ್ತಾರೆ ಎಂದು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು.
ನ್ಯಾಯಾಧೀಶರ ಕಾಳಜಿಗೆ ಶ್ಲಾಘನೆ: ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ನಿನ ಗೌರವಾಧ್ಯಕ್ಷ ಡಿ.ಎಚ್. ಕಂಬಳಿ ಮಾತನಾಡಿ, ಜಿಲ್ಲಾ ನ್ಯಾಯಾಧೀಶರು ಬಾಲ ಕಾರ್ಮಿಕರ ಕುರಿತು ತೋರಿದ ಕಾಳಜಿ ಶ್ಲಾಘನೀಯವಾಗಿದೆ. ಅವರಿಂದ ನಾವೆಲ್ಲ ಬಾಲಕಾರ್ಮಿಕರ ಕುರಿತಾಗಿ ಪ್ರತಿಜ್ಞೆ ಸ್ವೀಕರಿಸಿದ್ದೇವೆ. ಇದು ಇಂದಿನಿಂದ ನಮ್ಮ ಮನೆಗಳಿಂದಲೇ ಆರಂಭವಾದರೆ ಶುಭ ಸೂಚನೆಯಾಗುತ್ತದೆ. ವಿಶೇಷವಾಗಿ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶಗಳಲ್ಲಿ ಬಾಲ ಕಾರ್ಮಿಕರ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮವನ್ನುದ್ದೇಶಿಸಿ ಸಿಂಧನೂರು ಪ್ರಧಾನ ಸಿವಿಲ್ ನ್ಯಾಯಾಧೀಶೆ ಭಾರತಿ ರಾಯಣ್ಣವರ್ ಮಾತನಾಡಿದರು.
ಸೂಚನೆ: ಕಾರ್ಯಕ್ರಮಕ್ಕೆ ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ, ಡಿವೈಎಸ್ಪಿ ಎಂ.ಎಂ. ದೇಸಾಯಿ ಅವರನ್ನು ಆಹ್ವಾನಿಸಿದ್ದರೂ ಕಾರ್ಯಕ್ರಮಕ್ಕೆ ಅವರು ಗೈರು ಹಾಜರಾಗಿದ್ದರಿಂದ ಅಸಮಾಧಾನಗೊಂಡ ಜಿಲ್ಲಾ ನ್ಯಾಯಾಧೀಶ ಸತೀಶ ಸಿಂಗ್, ಮುಂದಿನ ಕಾರ್ಯಕ್ರಮಗಳಲ್ಲಿ ಅವರುಗಳು ಕಡ್ಡಾಯವಾಗಿ ಹಾಜರಾಗಬೇಕು. ಅಲ್ಲದೇ ತಾಪಂ ಇಒ, ಪಿಡಿಒಗಳು, ಬಾಲಕಾರ್ಮಿಕ ಇಲಾಖೆ ಅಧಿಕಾರಿಗಳು ಭಾಗವಹಿಸುವಂತೆ ಸೂಚಿಸಿ ಅವರಿಗೆ ನೋಟಿಸ್ ಜಾರಿ ಮಾಡಬೇಕೆಂದು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ. ಭೀಮನಗೌಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಶೇಖರಪ್ಪ ಶಾಲಿಗನೂರು, ನ್ಯಾಯವಾದಿಗಳ ಸಂಘದ ಖಜಾಂಚಿ ಸುರೇಶರೆಡ್ಡಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಭೀಮರಾಯ ವಕೀಲರು ನಿರೂಪಿಸಿದರು. ಪ್ರಹ್ಲಾದ ಗುಡಿ ವಕೀಲರು ಸ್ವಾಗತಿಸಿದರು. ಸುರೇಶರೆಡ್ಡಿ ಚನ್ನಳ್ಳಿ ವಂದಿಸಿದರು.
ಹಿರಿಯ ನ್ಯಾಯವಾದಿಗಳಾದ ಎನ್.ಕೋಟೇಶ್ವರರಾವ್, ವಿರುಪಾಕ್ಷಪ್ಪ ಗದ್ರಟಗಿ, ಕೆ.ಜಿಲಾನಿಪಾಷ ಜಾಗೀರದಾರ, ಡಿ.ಎಸ್. ಕಲ್ಮಠ, ಅಬ್ದುಲ್ ಗನಿಸಾಬ, ಮಲ್ಲಿಕಾರ್ಜುನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement