ಕುಡಿವ ನೀರಿನಲ್ಲಿ ಕೊಳಕು ವಾಸನೆ: ನಾಡಂಗ ಆಕ್ಷೇಪ
ಸಿಂಧನೂರು: ಜೂ.13 ನಗರದ ಪಟೇಲ್ ವಾಡಿಯಲ್ಲಿ ಸರಬರಾಜಾಗುತ್ತಿರುವ ನೀರಿನಲ್ಲಿ ಗಟಾರದ ವಾಸನೆ ಬರುತ್ತಿದೆ. ಒಡೆದ ಪೈಪ್‌ಗಳ ಮೂಲಕ ಅಲ್ಲಲ್ಲಿ ಗಟಾರದ ನೀರು ಸೇರಿರುವ ಅನುಮಾನವಿದ್ದು, ನಗರಸಭೆ ಆಡಳಿತ ಮಂಡಳಿ ಈ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಜನತೆಗೆ ಶುದ್ಧ ಕುಡಿವ ನೀರೊದಗಿಸಬೇಕು ಎಂದು ಸಮಾಜ ಸೇವಕ ಸಿದ್ದನಗೌಡ ನಾಡಂಗ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪಟೇಲ್ ವಾಡಿಯಲ್ಲಿ ನಾಯಿಗಳ ಹಾವಳಿಯೂ ಹೆಚ್ಚಿದೆ. ನಾಲ್ಕೈದು ಜನರು ನಾಯಿ ಕಡಿತದಿಂದ ಗಾಯಗೊಂಡಿದ್ದಾರೆ. ಸ್ವಚ್ಛತೆ ಇಲ್ಲದ ಕಾರಣ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ನಗರಸಭೆಯವರು ವಾರ್ಡ್‌ನ ಜನರ ನೆಮ್ಮದಿಯ ದೃಷ್ಟಿಯಿಂದ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ರಾಯಚೂರು: ತಾಲೂಕಿನ ಪೂರತಿಪ್ಲಿ ಗ್ರಾಮದ ಬೋವಿ (ವಡ್ಡರ) ಸಂಘದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಕೆ. ತಿಮ್ಮಪ್ಪ ಮತ್ತಿತರರ ಸಮ್ಮುಖದಲ್ಲಿ ಈಚೇಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಗ್ರಾಮ ಘಟಕದ ಅಧ್ಯಕ್ಷರಾಗಿ ಸತ್ಯರೆಡ್ಡಿ, ಉಪಾಧ್ಯಕ್ಷರಾಗಿ ನರಸಿಂಹಲು, ಕಾರ್ಯದರ್ಶಿಯಾಗಿ ಹನುಮಂತು, ಜಂಟಿ ಕಾರ್ಯದರ್ಶಿ ವೀರೇಶ್, ಖಜಾಂಚಿ ಶಿವರಾಜ್ ಹಾಗೂ 43 ಜನ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಸಂಘ ತಿಳಿಸಿದೆ.