'ಕುಡಿವ ನೀರು, ಒಳಚರಂಡಿ ಶೀಘ್ರ ಪರಿಶೀಲನೆ'
ಸಿಂಧನೂರು: ಏಷಿಯನ್ ಅಭಿವೃದ್ಧಿ ಅನುದಾನದಲ್ಲಿ ಸಿಂಧನೂರು ನಗರಕ್ಕೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ನಿರ್ಮಾಣದ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಲಭಿಸಿ ಏಳು ವರ್ಷಗಳಾದರೂ ಇಲ್ಲಿವರೆಗೆ ಕಾಮಗಾರಿ ಆರಂಭಗೊಂಡಿಲ್ಲ. ಮುಂದಿನವಾರ ಯೋಜನೆಯ ಪ್ರಗತಿಯನ್ನು ಪರಿಶೀಲಿಸುವುದಾಗಿ ಕೊಪ್ಪಳ ಸಂಸದ ಶಿವರಾಮೇಗೌಡ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಂಧನೂರು ಜೊತೆಗೆ ಗದಗ, ಕೊಪ್ಪಳ ಮತ್ತು ಗಂಗಾವತಿ ನಗರದಲ್ಲಿಯೂ ಒಳಚರಂಡಿ ಯೋಜನೆಗೆ ಸರ್ಕಾರ ಅಸ್ತು ನೀಡಿತ್ತು. ಅಲ್ಲಿ ಕಾಮಗಾರಿ ಪ್ರಾರಂಭವಾಗಿ ವರ್ಷವಾಗುತ್ತಾ ಬಂದಿದೆ. ಇಲ್ಲಿ ಮಾತ್ರ ಕೆಲಸಕ್ಕೆ ಚಾಲನೆ ದೊರೆತಿಲ್ಲ. ಎರಡು ಬಾರಿ ಟೆಂಡರ್ ತಿರಸ್ಕೃತವಾಗಿರುವುದು ಆಚ್ಚರ್ಯದ ಸಂಗತಿಯೇ ಆಗಿದೆಯೆಂದು ಹೇಳಿದ ಶಿವರಾಮೇಗೌಡ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಿ ತಕ್ಷಣ ಕಾಮಗಾರಿ ಆರಂಭಕ್ಕೆ ಕ್ರಮಕೈಗೊಳ್ಳಲು ಸರ್ಕಾರವನ್ನು ಆಗ್ರಹಪಡಿಸುವುದಾಗಿ ವಿವರಿಸಿದರು.
ಕೊಳಚೆ ಪ್ರದೇಶದ ಅಭಿವೃದ್ಧಿ ಯೋಜನೆಯಲ್ಲಿ ನಗರದ ವಿವಿಧ ಕೊಳಗೇರಿಗಳಲ್ಲಿ ಮನೆ ನಿರ್ಮಾಣ, ವಿದ್ಯುತ್ ಸೌಲಭ್ಯ, ಕುಡಿಯುವ ನೀರು, ಚರಂಡಿ ಮತ್ತು ರಸ್ತೆ ಸುಧಾರಣಾ ಕಾಮಗಾರಿಯನ್ನು ನಿರ್ವಹಿಸಲು ಅಂದಾಜು ಪತ್ರಿಕೆಯಲ್ಲಿ ಅಳವಡಿಸಲಾಗಿದ್ದು, ಗುತ್ತಿಗೆದಾರರು ಮತ್ತು ಅಧಿಕಾರಿಗಳ ಅವ್ಯವಹಾರದಿಂದ ಕಾಮಗಾರಿಗಳು ನೆನಗುದಿಗೆ ಬಿದ್ದಿವೆ. ರಸ್ತೆ ಚರಂಡಿ ಮತ್ತು ಇತರ ಮೂಲಸೌಲಭ್ಯಗಳನ್ನು ಒದಗಿಸಿಲ್ಲ. ಸರ್ಕಾರದ ಕೋಟಿಗಟ್ಟಲೇ ಹಣ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಯೋಜನೆಗಳನ್ನು ಸಮಗ್ರ ತನಿಖೆಗೊಳಪಡಿಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.