ಗುಟ್ಕಾ ಮಾರಾಟ ನಿಷೇಧ; ಡಿಸಿ
ರಾಯಚೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ(ನಿಷೇಧ ಮತ್ತು ಮಾರಾಟ ನಿರ್ಬಂಧ)ನಿಬಂಧನೆಗಳು 2011ರ ನಿಬಂಧನೆ 2, 3 ಮತ್ತು 4ರ ಪ್ರಕಾರ ಜಿಲ್ಲಾದ್ಯಂತ ತಕ್ಷಣದಿಂದಲೇ ಜಾರಿಗೆ ಬರುವಂತೆ ಗುಟ್ಕಾ ಮತ್ತು ಪಾನ್ ಮಸಾಲ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ತಂಬಾಕು ಮತ್ತು ನಿಕೋಟಿನ್ ಘಟಕಾಂಶಗಳನ್ನೊಳಗೊಂಡ ಗುಟ್ಕಾ ಮತ್ತು ಪಾನ್ ಮಸಾಲ ಹಾಗೂ ಇತರೆ ಯಾವುದೇ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಗುಟ್ಕಾ ಮತ್ತು ಪಾನ್ ಮಸಾಲ ಪದಾರ್ಥಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಹಾಗೂ ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಎಚ್ಚರಿಸಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ- 2006ರ(ನಿಷೇಧ ಮತ್ತು ಮಾರಾಟ ನಿರ್ಬಂಧ) ನಿಬಂಧನೆಗಳ ಅನುಸಾರ ತಂಬಾಕು ಮತ್ತು ನಿಕೋಟಿನ್ ಘಟಕಾಂಶಗಳನ್ನೊಗೊಂಡ ಆಹಾರ ಪದಾರ್ಥಗಳ ಮಾರಾಟವನ್ನು ಕರ್ನಾಟಕ ರಾಜ್ಯಾದ್ಯಂತ ಮೇ 30ರಿಂದ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಆದೇಶ ಉಲ್ಲಂಘಿಸುವವರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಕ್ರಮ ಜರುಗಿಸಲಾಗುತ್ತದೆ. ನಿಯಮ ಉಲ್ಲಂಘಿಸುವವರಿಗೆ ಗರಿಷ್ಠ 10 ಲಕ್ಷ ದಂಡ ವಿಧಿಸಲಾಗುತ್ತದೆ. ಗರಿಷ್ಠ ಸೆರೆವಾಸ ದಂಡನೆಯನ್ನು ವಿಧಿಸಲು ಅವಕಾಶವಿದ್ದು, ಸಾರ್ವಜನಿಕರು ಹಾಗೂ ವರ್ತಕರು ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಾಲೂಕು ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆ, ಪುರಸಭೆ ಅಧಿಕಾರಿಗಳ ಒಳಗೊಂಡ ತಂಡ ರಚಿಸಿ ನಿಷೇಧದ ಕಟ್ಟುನಿಟ್ಟಿನ ಜಾರಿಗೆ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾಲೂಕಿನ ಎಲ್ಲ ಗುಟ್ಕಾ ವ್ಯಾಪಾರಸ್ಥರು, ತಯಾರಕರು, ದಾಸ್ತಾನುಗಾರರು, ವಿತರಕರ ಸ್ಥಳಗಳಿಗೆ ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರೂ ಕಾನೂನು ಉಲ್ಲಂಘಿಸುವವರ ಬಗ್ಗೆ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಸಹಕರಿಸಲು ಅವರು ಮನವಿ ಮಾಡಿದ್ದಾರೆ.