ನೋಟಿಸ್ ಜಾರಿಗೆ ಸೂಚನೆ
ಕ.ಪ್ರ. ವಾರ್ತೆ, ರಾಯಚೂರು, ಜೂ.14
ಜಿಪಂ ಸಭೆಗಳಿಗೆ ಅಧ್ಯಕ್ಷರ ಪೂರ್ವಾನುಮತಿಯಿಲ್ಲದೇ ಸಭೆಗೆ ಅಧಿಕಾರಿಗಳು ಗೈರು ಹಾಜರಾಗುತ್ತಿರುವ ವರ್ತನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಜಿಪಂ ಅಧ್ಯಕ್ಷೆ ಲಲಿತಮ್ಮ ಅವರು, ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದ ಪ್ರಸಂಗ ಶುಕ್ರವಾರ ನಡೆಯಿತು.
ನಗರದ ಜಿಪಂ ಸಭಾಂಗಣದಲ್ಲಿ ಕರೆದಿದ್ದ ಕೆಡಿಪಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಜನಪ್ರತಿನಿಧಿಗಳನ್ನು ಹೊರತುಪಡಿಸಿ ಜಿಪಂ ಸಭೆಗಳಿಗೆ ಅಧಿಕಾರಿಗಳು ಮಾತ್ರ ಆಗಮಿಸುತ್ತಿಲ್ಲ. ಪೂರ್ವಾನುಮತಿಯಿಲ್ಲದೇ ಕಳೆದ ಅನೇಕ ಸಭೆಗಳಿಂದ ಗೈರು ಹಾಜರಾಗುತ್ತಿದ್ದಾರೆ. ಇಂಥ ಅಧಿಕಾರಿಗಳಿಗೆ ನೋಟಿಸ್ ಜಾರಿಗೆ ಮಾಡಲು ಸೂಚಿಸಿದರು.
ತೀವ್ರ ಅಸಮಾಧಾನ: ಈ ವೇಳೆ ಸಭೆಗೆ ಅಧಿಕಾರಿಗಳ ಬದಲಿಗೆ ಸಂಬಂಧಿಸಿದ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರಿಂದ ತೀವ್ರ ಅಸಮಾಧಾನಗೊಂಡ ಜಿಪಂ ಅಧ್ಯಕ್ಷರು ಅವರನ್ನು ಸಭೆಯಿಂದ ಹೊರಹೋಗುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿನ ಕಾಮಗಾರಿಗಳ ಪ್ರಗತಿಯನ್ನು ಸಭೆಗೆ ಅಧಿಕಾರಿಗಳು ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಚರ್ಚೆ ವೇಳೆ ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಸಂಬಂಧಿಸಿದಂತೆ ಅವಶ್ಯವಿರುವ ಗ್ರಾಮಗಳಲ್ಲಿ ಕಟ್ಟಡ ದುರಸ್ತಿಗಾಗಿ ಕ್ರಿಯಾ ಯೋಜನೆ ಸಿದ್ದಪಡಿಸಿ ತಾಪಂಗಳಿಗೆ ಸಲ್ಲಿಸಿ ಅನುಮೋದನೆ ಪಡೆಯಲು ಸಭೆಯಲ್ಲಿ ಸೂಚಿಸಲಾಯಿತು.
ಲೋಕೋಪಯೋಗಿ, ಆರೋಗ್ಯ, ಜಿಲ್ಲಾ ಕೈಗಾರಿಕೆ ಕೇಂದ್ರ, ರೇಷ್ಮೆ, ಸಹಕಾರ ಇಲಾಖೆ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಮತ್ತಿತರೆ ಇಲಾಖೆಗಳ ಪ್ರಗತಿಯನ್ನು ಈ ವೇಳೆ ಪರಿಶೀಲಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಕೆ. ಶರಣಪ್ಪ, ಜಿಪಂ ಸಿಇಒ ಡಾ. ಜ್ಞಾನಪ್ರಕಾಶ್, ಯೋಜನಾಧಿಕಾರಿ ಡಾ. ರೋಣಿ ಮತ್ತಿತರರು ಇದ್ದರು.