ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಾಯಚೂರು ನಗರ ಸ್ವಚ್ಛತೆಗೆ ಆಗ್ರಹ: ಶಾಸಕರಿಗೆ ಮನವಿ

Lingaraj Badiger
Updated On : 15 Jun 2013, 10:55 am

ರಾಯಚೂರು: ಸ್ವಚ್ಛ ಹಾಗೂ ಸ್ವಸ್ಥ ನಗರಕ್ಕಾಗಿ ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿರುವ ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ ಪ್ರಮುಖರು ಈಚೆಗೆ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಅವರಿಗೆ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಿದರು.
ನಗರದ ಶಾಸಕರ ನಿವಾಸದಲ್ಲಿ ಭೇಟಿ ಮಾಡಿದ ಸಂಘಟನೆಯ ಪ್ರಮುಖರು, ನಗರದಲ್ಲಿ ಶುದ್ಧ ಕುಡಿವ ನೀರು ಪೂರೈಕೆಗೆ ಸೆಟ್ಲಿಂಗ್ ಟ್ಯಾಂಕ್ ನಿರ್ಮಾಣ ಮಾಡಬೇಕು. ಹದಗೆಟ್ಟಿರುವ ಗಂಜ್ ರಸ್ತೆ, ಬಸವನಭಾವಿ ವೃತ್ತದಿಂದ ಮಾರ್ಕೆಟ್ ಯಾರ್ಡ್ ರಸ್ತೆ, ನೇತಾಜಿ ನಗರ ವೃತ್ತದಿಂದ ಹನುಮಾನ್ ಟಾಕೀಸ್ ರಸ್ತೆ, ಉಮಾ ಹೊಟೇಲ್ ನಿಂದ ಅಶೋಕ್ ಡಿಪೋವರೆಗಿನ ರಸ್ತೆ ಸೇರಿ ತಗ್ಗು ದಿನ್ನೆಗಳಿಂದ ಕೂಡಿರುವ ರಸ್ತೆಗಳ ದುರಸ್ತಿಗೆ ಒತ್ತಾಯಿಸಿದರು.
ಒಳಚರಂಡಿ: ನಗರದ ರಾಜಾ ಕಾಲುವೆ ಸೇರಿದಂತೆ ಎಲ್ಲೆಡೆಯ ಚರಂಡಿಗಳಲ್ಲಿ ತುಂಬಿರುವ ಹೂಳು ತೆರವುಗೊಳಿಸಬೇಕು. ರಾಜಾ ಕಾಲುವೆಯ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಬೇಕು. ಒಳಚರಂಡಿ ನಿರ್ಮಾಣ ಕಾಮಗಾರಿ ಪುನಾರಂಭಿಸಿ ಶೀಘ್ರ ಪೂರ್ಣಗೊಳಿಸಬೇಕು. ನಗರದ ಎಲ್ಲೆಡೆ ಕಸದ ತೊಟ್ಟಿಗಳನ್ನಿರಿಸಿ ವಾರಕ್ಕೆರಡು ಬಾರಿ ಕಸದ ವಿಲೇವಾರಿ ನಡೆಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕ್ರಮಕ್ಕೆ ಒತ್ತಾಯ: ನಗರದ ಎಲ್ಲ ಬಡಾವಣೆಗಳ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಬೇಕು.ಉಚಿತ ಮೂತ್ರಾಲಯ, ಶೌಚಾಲಯ ನಿರ್ಮಾಣ ಮಾಡಿ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು.ತರಕಾರಿ ಮಾರುಕಟ್ಟೆ ಕಾಮಗಾರಿ ಕೂಡಲೇ ಆರಂಭಿಸಬೇಕು. ಡೆಂಘೀ ಜ್ವರಕ್ಕೆ ಚಿಕಿತ್ಸೆ ನೀಡಲು ಅವಶ್ಯಕವಿರುವ ರಕ್ತದ ಕಣ ಪ್ರತ್ಯೇಕಿಸುವ ಘಟಕದ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಂಘಟನೆಯ ಪ್ರಮುಖರಾದ ಅಪರ್ಣಾ ಬಿ.ಆರ್, ಮಹೆಬೂಬ್ ಪಾಷಾ ಮೂಲಿಮನಿ, ಸಹನಾ ಹಿರೇಮಠ, ಮಹಾವೀರ್, ಬಸನಗೌಡ ಪಾಟೀಲ್ ಹೊನ್ನಕುಣಿ, ಚನ್ನಬಸವ ಜಾನೇಕಲ್, ಖಾಲೀದ್ ಮೊಹಿಯುದ್ದೀನ್, ಎನ್.ಎಸ್.ರಾಮಣ್ಣ, ಸಂತೋಷಕುಮಾರ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement