ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿವಿಧ ಸಂಘಟನೆಗಳ ಪ್ರತಿಭಟನೆ

Lingaraj Badiger
Updated On : 15 Jun 2013, 11:00 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜೂ.14
ಅಂಗನವಾಡಿ, ಅಕ್ಷರ ದಾಸೋಹ ಬಿಸಿಯೂಟ ನೌಕರರ, ಆಶಾ ಕಾರ್ಯಕರ್ತೆಯರ ಹಾಗೂ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ನೌಕರರು, ಕಾರ್ಯಕರ್ತರು ಹಾಗೂ ಹಮಾಲಿ ಕಾರ್ಮಿಕರು ಪ್ರತ್ಯೇಕವಾಗಿ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಆಕ್ರೋಶ: ಅಂಗನವಾಡಿ, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರು ಹಾಗೂ ಅಡುಗೆ ಕೆಲಸಗಾರರು ಕನಿಷ್ಟ ಕೂಲಿ, ಉದ್ಯೋಗ ಭದ್ರತೆ ಹಾಗೂ ಸೌಲಭ್ಯಗಳಿಲ್ಲದೆ ಹಗಲಿರುಳು ಗೌರವಧನದ ಆಧಾರದಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು. ಅಂಗನವಾಡಿ, ಹಮಾಲಿ, ಬಿಸಿಯೂಟ, ಗ್ರಾಪಂ, ಆಶಾ, ಮನೆಗೆಲಸದವರು, ಆಟೋ ಸೇರಿದಂತೆ ಮುಂತಾದ ಕಾರ್ಮಿಕರು ಮತ್ತು ಖಾಸಗಿ ಸಾರ್ವಜನಿಕ ಕ್ಷೇತ್ರದ ಕೈಗಾರಿಕಾ ಕಾಯಂ ಮತ್ತು ಗುತ್ತಿಗೆ ಕಾರ್ಮಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆಗಳು: ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ನೌಕರರೆಂದು ಪರಿಗಣಿಸಿ ಕನಿಷ್ಠ ಕೂಲಿ ರು. 10 ಸಾವಿರ ನೀಡಬೇಕು. 2009 ಸೆ.15 ರ ಹೋರಾಟದಲ್ಲಿ ಭಾಗವಹಿಸಿದವರ ಮೇಲೆ ಹಾಕಿರುವ ಮೊಕದ್ದಮೆ ವಾಪಸ್ ಪಡೆಯಬೇಕು. ಖಾತ್ರಿ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಹಾಗೂ ಭಾಗ್ಯ ಲಕ್ಷ್ಮೀ ಬಾಂಡ್ ಮುಂದುವರಿಸಬೇಕು. ಷೆಡ್ಯೂಲ್ ವ್ಯತ್ಯಾಸವಿಲ್ಲದೆ ಸೂಚ್ಯಂಕ ಆಧಾರಿತ ರು. 10 ಸಾವಿರ ಕನಿಷ್ಟ ವೇತನ ಕಾಯಿದೆ ತಿದ್ದುಪಡಿ ಮಾಡಿ ಅದರ ವ್ಯಾಪ್ತಿ ಸಾರ್ವತ್ರೀಕಗೊಳಿಸಬೇಕು. ಗುತ್ತಿಗೆ ಕಾರ್ಮಿಕ ಪದ್ಧತಿ ಕೈಬಿಟ್ಟು ಕಾಯಂ ಮಾಡಬೇಕು. 45 ದಿನದಲ್ಲಿ ಎನ್‌ಪಿಎಸ್ ಕೈಬಿಟ್ಟು ಎಲ್ಲ ಕಾರ್ಮಿಕರಿಗೆ, ನೌಕರರಿಗೆ ನಿವೃತ್ತಿ ವೇತನ ಕೊಡಬೇಕು. ಎನ್‌ಪಿಎಲ್‌ಎಫ್ ಇನ್ಸೂರೆನ್ಸ್ ವಾಪಸ್ ಆಗಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನಾ ಮೆರವಣಿಗೆಯಲ್ಲಿ ಸಿಐಟಿಯು ಸಂಘಟನೆ ತಾಲೂಕು ಅಧ್ಯಕ್ಷ ಕೆ.ಎಸ್. ಶಿವಾನಂದ, ಅಂಗನವಾಡಿ, ಅಕ್ಷರ ದಾಸೋಹ ಹಾಗೂ ಬಿಸಿಯೂಟ ನೌಕರರ ಸಂಘದ ಕಾರ್ಯದರ್ಶಿ ಸರಸ್ವತಿ ಈಚನಾಳ, ಉಪಾಧ್ಯಕ್ಷೆ ಬಸಮ್ಮ, ಅಧ್ಯಕ್ಷೆ ಲಕ್ಷ್ಮೀ ನಗನೂರ, ಗೌರವಾಧ್ಯಕ್ಷೆ ಮರಿಯಮ್ಮ, ಜಿ.ಎಸ್. ವೆಂಕೋಬ, ತುಳುಜಾಬಾಯಿ ಮಸ್ಕಿ, ಪದ್ಮಾ ಮಸ್ಕಿ, ಯಲ್ಲಮ್ಮ ಮುದಗಲ್, ಎಂ.ಸಿ. ನಿಂಗಪ್ಪ, ಕಂಟೆಮ್ಮ, ಉದಾಸಮ್ಮ, ಸುಧಾ ಸೇರಿದಂತೆ ಇನ್ನಿತರರು ಇದ್ದರು.
ಹಮಾಲಿ ಕಾರ್ಮಿಕರ ಬೇಡಿಕೆ: ಎಪಿಎಂಸಿ ಮತ್ತು ಬಜಾರ್ ಹಮಾಲರಿಗೆ ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಕೊಡಬೇಕು. ಲಿಂಗಸ್ಗೂರು ಮತ್ತು ಮುದಗಲ್ ಎಪಿಎಂಸಿಯಲ್ಲಿ ಶ್ರಮಿಕ ಭವನ ಕಟ್ಟಿಸಿಕೊಡಬೇಕು. ಎಪಿಎಂಸಿ ಹಮಾಲರಿಗೆ ವರ್ಷಕ್ಕೆ 2 ಜೊತೆ ಬಟ್ಟೆ ಕೊಡಬೇಕು ಹಾಗೂ ಅವರ ಮಕ್ಕಳಿಗೆ ಶಿಷ್ಯ ವೇತನ ಕೊಡಬೇಕು. ಹಮಾಲಿ ಕಾರ್ಮಿಕರಿಗೆ ಕಲ್ಯಾಣ ನಿಧಿ ಸ್ಥಾಪಿಸಬೇಕು. ಗುತ್ತಿಗೆ ಪದ್ಧತಿ ನಿಷೇಧ ಎಲ್ಲ ಕಾರ್ಮಿಕರಿಗೂ ಖಾತ್ರಿಯಾದ ಪಿಂಚಣಿ ನೀಡಬೇಕು. ಕಾರ್ಮಿಕ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಹೆಚ್ಚಿಸಬೇಕೆಂದು ಹಮಾಲರ ಸಂಘದ ಅಧ್ಯಕ್ಷ ದಾವಲಸಾಬ, ಪ್ರದಾನ ಕಾರ್ಯದರ್ಶಿ ಯಂಕಪ್ಪ, ಖಜಾಂಚಿ ದಸ್ತಗೀರಸಾಬ, ಗದ್ದೆಪ್ಪ, ಹನುಮಂತ ಸೇರಿದಂತೆ ಇನ್ನಿತರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಮನವಿ
ಸಿಂಧನೂರು: ಹಮಾಲಿ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯುನಿಂದ ಶುಕ್ರವಾರ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾರ್ಮಿಕ ಕಲ್ಯಾಣಕ್ಕೆ 1000 ಕೋಟಿ ಅನುದಾನದ ಹಂಚಿಕೆಯಾಗಬೇಕು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಯಂಕಪ್ಪ ಕೆಂಗಲ್ ಒತ್ತಾಯಿಸಿದರು.
ಕೂಲಿಕಾರರಿಗೆ ಉದ್ಯೋಗ ಚೀಟಿ ನೀಡಬೇಕು. ಪರವಾನಗಿ ಹೊಂದಿದ ಹಮಾಲರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕೆಂದು ತಾಲೂಕಾಧ್ಯಕ್ಷ ನರಸಿಂಹಪ್ಪ ಆಗ್ರಹಿಸಿದರು. ಸಂಘಟನೆಯ ಕಾರ್ಯದರ್ಶಿ ಹನುಮಂತಪ್ಪ, ಎಚ್. ಮರಿಸ್ವಾಮಿ, ಕರಿಯಪ್ಪ ನಾಯ್ಕ, ಇಬ್ರಾಹಿಂಸಾಬ, ಹುಸೇನಪ್ಪ, ಬಂಡಾರಪ್ಪ, ಹನುಮಂತ, ಶಿವಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಹಮಾಲರ ಪ್ರತಿಭಟನೆ
ಮಸ್ಕಿ: ಹಮಾಲಿ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಮಲ್ಲಿಕಾರ್ಜುನ ಹಮಾಲರ ಸಂಘದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಗಚ್ಚಿನ ಮಠದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ವಿಶೇಷ ತಹಸೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಿದರು. ಮಸ್ಕಿ ಮಲ್ಲಿಕಾರ್ಜುನ ಹಮಾಲರ ಸಂಘದ ಗೌರವಾಧ್ಯಕ್ಷ ಹನಮಂತಪ್ಪ ತೋರಣದಿನ್ನಿ, ಅಧ್ಯಕ್ಷ ಹನಮಂತಪ್ಪ ಭಜಂತ್ರಿ, ಉಪಾಧ್ಯಕ್ಷ ಬಸಪ್ಪ ಸೋಮಲಾಪೂರ, ಕಾರ್ಯದರ್ಶಿ ದುರಗಪ್ಪ ಬುದ್ದಿನ್ನಿ, ಸಹಕಾರ್ಯದರ್ಶಿಗಳಾದ ಅಮರಪ್ಪ ಚೌರದ, ಹನುಮಂತ ಕೆಂಭಾವಿ, ಖಜಾಂಚಿ ಚನ್ನಮಲ್ಲಯ್ಯ ಲಿಂಗಸ್ಗೂರು, ಆದಪ್ಪ ನಗನೂರು, ಶಿವಪ್ಪ, ರಂಗಪ್ಪ ಕುರಕುಂದಿ ಸೇರಿ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
ರಾಯಚೂರಲ್ಲೂ ಪ್ರತಿಭಟನೆ
ರಾಯಚೂರು: ರಾಯಚೂರು ಎಪಿಎಂಸಿ ಗಂಜ್ ಹಮಾಲರ ಸಂಘದಿಂದ ನಗರದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ನಗರದ ಎಪಿಎಂಸಿ ಎದುರು ಪ್ರತಿಭಟನೆ ನಡೆಸಿದ ಹಮಾಲರ ಸಂಘದ ಕಾರ್ಯಕರ್ತರು ರಾಜ್ಯದ ಸಿಎಂಗೆ ಮನವಿ ಸಲ್ಲಿಸಿದರು. ಎಪಿಎಂಸಿ ಆವರಣದಲ್ಲಿ ಹಮಾಲರಿಗೆ ಶುದ್ಧ ಕುಡಿವ ನೀರು, ವಿವಿಧ ಮೂಲಸೌಲಭ್ಯ ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿದರು. ಸಂಘಟನೆ ಗೌರವಾಧ್ಯಕ್ಷ ವೀರಭದ್ರ ವಕೀಲರು, ಅಧ್ಯಕ್ಷ ಪ್ರಹ್ಲಾದರೆಡ್ಡಿ, ತಾಯಪ್ಪ, ಶಾಲಂ, ಆನಂದ, ಲಕ್ಷ್ಮಿ, ಲಕ್ಷ್ಮಿ ಮರ್ಚೆಡ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement