ಸಿಐಟಿಯು ಪ್ರತಿಭಟನೆ
ಕ.ಪ್ರ. ವಾರ್ತೆ, ರಾಯಚೂರು, ಜೂ.14
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ನಗರದಲ್ಲಿ ಶುಕ್ರವಾರ ಸಿಐಟಿಯು ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಉದ್ಯಾನವನದಿಂದ ಪ್ರಮುಖ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿ, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ಬೆಲೆಯೇರಿಕೆಯನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ಸವಲತ್ತು ನೀಡಿ: ಕಾರ್ಮಿಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸೃಷ್ಟಿಸುವ ಕಾರ್ಯವಾಗಬೇಕು. ಕಾರ್ಮಿಕ ಕಾನೂನುಗಳನ್ನು ಕಠಿಣವಾಗಿ ಅನುಷ್ಠಾನಗೊಳಿಸಬೇಕು. ಸಾರ್ವತ್ರಿಕವಾಗಿ ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಹಣಕಾಸು ಸಂಪನ್ಮೂಲ ಒದಗಿಸುವ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಾಯಂ ಹಾಗೂ ನಿರಂತರ ಸ್ವರೂಪದ ಕೆಲಸಗಳನ್ನು ಗುತ್ತಿಗೆ ಕಾರ್ಮಿಕರ ನೇಮಕದ ಮೂಲಕ ನಿರ್ವಹಿಸಕೂಡದು. ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಕಾಯಂ ಕಾರ್ಮಿಕರಿಗೆ ದೊರೆಯುವ ಎಲ್ಲ ಸವಲತ್ತುಗಳನ್ನು ಹಾಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ನೀಡಬೇಕೆಂದು ಒತ್ತಾಯಿಸಿದರು.
ನಿರ್ಣಯ ದೃಢೀಕರಣಕ್ಕೆ ಒತ್ತಾಯ: ಲಾಭದಲ್ಲಿ ಮುನ್ನಡೆಯುತ್ತಿರುವ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳ ಷೇರುಗಳನ್ನು ಕೇಂದ್ರ ಸರ್ಕಾರ ಮಾರಾಟ ಮಾಡಬಾರದು. ಖಾಸಗೀಕರಣಕ್ಕೆ ಮುಂದಾಗಬಾರದೆಂದು ಆಗ್ರಹಿಸಿದ ಅವರು, ಬೋನಸ್, ಭವಿಷ್ಯ ನಿಧಿ ಪಾವತಿಗೆ ಇರುವ ಎಲ್ಲ ಮಿತಿ ಹಾಗೂ ಅರ್ಹತೆಗಳನ್ನು ತೆರವುಗೊಳಿಸಿ ಗ್ರ್ಯಾಚುಟಿ ಫಂಡ್ ಹೆಚ್ಚಿಸುವಂತೆ ಆಗ್ರಹಿಸಿದರು.
ಕನಿಷ್ಠ ವೇತನವನ್ನು 10 ಸಾವಿರ ರು.ಗೆ ನಿಗದಿ ಮಾಡಬೇಕು. ಈ ನಿಟ್ಟಿನಲ್ಲಿ ಕನಿಷ್ಠ ಕೂಲಿ ಕಾಯಿದೆಗೆ ತಿದ್ದುಪಡಿ ತಂದು ಅದರ ವ್ಯಾಪ್ತಿಯನ್ನು ಸಾರ್ವತ್ರಿಕಗೊಳಿಸಬೇಕು. 45 ದಿನಗಳ ಒಳಗೆ ಕಾರ್ಮಿಕ ಸಂಘಟನೆಗಳ ಕಡ್ಡಾಯ ನೋಂದಣಿ ಮತ್ತು ಕಾರ್ಮಿಕ ಸಮಾವೇಶಗಳ ನಿರ್ಣಯಗಳ ದೃಢೀಕರಿಸುವಂತೆ ಪ್ರತಿಭಟನಾ ನಿರತರು ಒತ್ತಾಯಿಸಿದರು.
ಎಲ್ಲ ಕಾರ್ಮಿಕರಿಗೆ ನಿವೃತ್ತಿ ವೇತನ ನೀಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು. ಸಂಘಟನೆಯ ಅಧ್ಯಕ್ಷೆ ಎಚ್. ಪದ್ಮಾ, ಉಪಾಧ್ಯಕ್ಷರಾದ ವೀರಭದ್ರ, ಜೆ.ಎಂ. ಚೆನ್ನಬಸಯ್ಯ, ವೈ. ಈರಣ್ಣ, ಶೇಕ್ಷಾಖಾದ್ರಿ ಮತ್ತಿತರರು ಪಾಲ್ಗೊಂಡಿದ್ದರು.
'ಗ್ರಾಪಂ ನೌಕರರ ಬಾಕಿ ವೇತನ ಪಾವತಿಸಿ'
'ದೇವದುರ್ಗ: ತಾಲೂಕಿನ 28 ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪಂಚಾಯಿತಿ ನೌಕರರ ಬಾಕಿ ವೇತನ ಕೂಡಲೇ ಪಾವತಿಸುವಂತೆ ಸಿಐಟಿಯು ಸಂಘಟನೆಯ ತಾಲೂಕು ಸಮಿತಿ ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಒತ್ತಾಯಿಸಿದರು.
ಅವರು ಶುಕ್ರವಾರ ಸಿಐಟಿಯು ತಾಲೂಕು ಸಮಿತಿಯಿಂದ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ಬೆಲೆಯೇರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ಬೆಲೆಯೇರಿಕೆ ನಿಯಂತ್ರಿಸಬೇಕೆಂದು ಆಗ್ರಹಿಸಿದರು.
ಕಾರ್ಮಿಕರ ಹಿತಕಾಯಲು ರೂಪಿಸಿದ ಕಾನೂನುಗಳ ಕಟ್ಟುನಿಟ್ಟಿನ ಅನುಷ್ಠಾನಗೊಳಿಸಬೇಕು.ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಒದಗಿಸಲು ಹಣಕಾಸು ಸಂಪನ್ಮೂಲ ಒದಗಿಸುವ ಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಸಂಗಮೇಶ್, ಶೇಖಮ್ಮ, ಕೆ. ರಂಗಮ್ಮ ಮಾತನಾಡಿದರು. ರಂಗಮ್ಮ, ಅನ್ವರ, ಮಲ್ಲಪ್ಪ ಹೂಗಾರ, ವೆಂಕೋಬ, ಮರಿಯಮ್ಮ, ರಾಜಾಸಾಬ ಅರಕೇರಾ, ಮೌನೇಶ ಅಂದೋಲಿ ಸೇರಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.