ಕಳಪೆ ಬಿತ್ತನೆ ಬೀಜ; ಆರೋಪ
ಲಿಂಗಸ್ಗೂರು: ತಾಲೂಕಿನ ಗುರುಗುಂಟಾ ಗ್ರಾಮದ ರೈತ ಸಂಪರ್ಕ ಕೇಂದ್ರದಿಂದ ವಿತರಣೆ ಮಾಡಿದ ಸೂರ್ಯಕಾಂತಿ ಬಿತ್ತನೆ ಬೀಜ ಕಳಪೆಯಿಂದ ಕೂಡಿದೆ ಎಂದು ಗೌಡೂರು ಗ್ರಾಮದ ರೈತ ಸಿದ್ದೇಶ ಈಶಪ್ಪ ಮಾಸರೆಡ್ಡಿ ಆರೋಪಿಸಿದ್ದಾರೆ.
ಗುರುಗುಂಟಾ ರೈತ ಸಂಪರ್ಕ ಕೇಂದ್ರದಿಂದ ಬಸವರಾಜ ಆಗ್ರೋ ಟ್ರೇಡರ್ಸ್ ಧಾರವಾಡ ಏಜೆನ್ಸಿ ಸರಬರಾಜು ಮಾಡಿದೆ ಎನ್ನಲಾದ ಲಕ್ಷ್ಮೀ ಸೀಡ್ಸ್ 369 ಕಂಪನಿಯ 2 ಕೆಜಿಯ 4 ಪಾಕೀಟು ಸೂರ್ಯಕಾಂತಿ ಬೀಜ ಖರೀದಿಸಿ ಶನಿವಾರ ಬಿತ್ತನೆ ಮಾಡಲು ಜಮೀನಿಗೆ ತೆರಳಿ 2 ಪ್ಯಾಕೆಟ್ ಬೀಜ ಬಿತ್ತನೆ ಮಾಡಲಾಯಿತು. ನಂತರ ಇನ್ನುಳಿದ ಬೀಜದ ಪ್ಯಾಕೆಟ್ ಹರಿಯುತ್ತಿದ್ದಂತೆ ಕಳಪೆ ಇರುವುದು ಕಂಡು ಬಂದಿತು.
ಸೂರ್ಯಕಾಂತಿ ಬೀಜಗಳ ಮೇಲಿನ ಸಿಪ್ಪೆ ಕಿತ್ತಿ ಹೋಗಿರುವುದು ಗಮನಕ್ಕೆ ಬಂದಿತು. ಬೀಜಗಳ ಒಳ ಪದರು ಕಾಣುತ್ತಿತ್ತು. ಇದರಿಂದ ಆತಂಕಗೊಂಡು ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಸೂರ್ಯಕಾಂತಿ ಬಿತ್ತನೆ ಬೀಜದ ಪ್ಯಾಕೆಟ್‌ನ್ನು ಕೃಷಿ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಇದರಿಂದ ಬೇರೆ ಕಂಪನಿಯ ಸೂರ್ಯಕಾಂತಿ ಬೀಜ ನೀಡಲಾಯಿತು ಎಂದು ರೈತ ಸಿದ್ದೇಶ ನುಡಿಯುತ್ತಾನೆ.
ಅಧಿಕಾರಿ ಸ್ಪಷ್ಟನೆ: ಗೌಡೂರು ಗ್ರಾಮದ ಸಿದ್ದೇಶ ಎಂಬವರು ನೀಡಿದ ದೂರು ಆಧರಿಸಿ ರೈತ ಸಂಪರ್ಕ ಕೇಂದ್ರದಿಂದ ಲಕ್ಷ್ಮೀ ಸೀಡ್ಸ್ 369 ಬಿತ್ತನೆ ಬೀಜ ವಿತರಣೆ ಮಾಡುವುದು ಸ್ಥಗಿತಗೊಳಿಸಲಾಗುವುದು. ಅಲ್ಲದೆ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಕೇಂದ್ರದ ಅಧಿಕಾರಿ ಬಿರಾದಾರ ಸ್ಪಷ್ಟಪಡಿಸಿದ್ದಾರೆ.