ಟ್ಯಾಂಕ್ ಇದ್ದರೂ ಸಿಗದ ಕುಡಿವ ನೀರು
ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.15
ಮೂರು ವರ್ಷಗಳ ಹಿಂದೆ ಟ್ಯಾಂಕ್ ನಿರ್ಮಿಸಲಾಗಿದೆ. ಸುರಕ್ಷತೆಗಾಗಿ ಸುತ್ತಲೂ ತಂತಿ ಬೇಲಿಯೂ ಹಾಕಲಾಗಿದೆ. ಪೈಪ್‌ಲೈನ್ ಸಂಪರ್ಕ ಕಲ್ಪಿಸಿ ವರ್ಷ ಗತಿಸಿದೆ. ಗ್ರಾಮದ ಜನರನಲ್ಲಿ, ಕುಡಿಯುವ ನೀರಿನ ತೊಟ್ಟಿಗಳಲ್ಲಿ ಹನಿ ನೀರು ತೊಟ್ಟಿಕ್ಕುತ್ತಿಲ್ಲ. ಹಳ್ಳದ ಅಶುದ್ಧ ನೀರನ್ನೇ ಜನರು ಕುಡಿದು ಮೈ- ಕೈ ನೋವಿನಿಂದ ಬಳಲುತ್ತಿದ್ದಾರೆ. ಇದು ತಾಲೂಕಿನ ಗಡಿ ಗ್ರಾಮ ಯಾಪಲಪರ್ವಿ ನಿವಾಸಿಗಳ ದುರ್ಗತಿ.
ಭೂಸೇನಾ ನಿಗಮದವರು ನಿರ್ಮಿಸಿದ ನೀರಿನ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿದೆ. ಆದರೆ ಇದುವರೆಗೂ ನೀರಿನ ಸಂಪರ್ಕ ಕಂಡಿಲ್ಲ. ಅವರಿವರ ಹುಸಿ ಭರವಸೆಗಳಷ್ಟೆ ದೊರೆತಿವೆಯೇ ಹೊರತು ಶುದ್ಧ ಕುಡಿಯುವ ನೀರು ಕನಸಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಹಳ್ಳದ ನೀರು: ಪೋತ್ನಾಳ ಹಳ್ಳದ ಸಪ್ಪೆ ನೀರನ್ನೇ ಇಲ್ಲಿನ ಜನರು ಕುಡಿಯಲು ನೆಚ್ಚಿಕೊಂಡಿದ್ದಾರೆ. ಪ್ಲೋರೈಡ್ ಮುಕ್ತ ನೀರನ್ನೇ ಅನಿವಾರ್ಯವಾಗಿ ಸೇವಿಸುತ್ತಿರುವ ಅವರಿಗೆ ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ. ಜೋರು ಮಳೆಬಂದರೆ ಹಳ್ಳದ ನೀರೆಲ್ಲ ಹೊಲಸಾಗುವುದರಿಂದ ಆಗ ಮತ್ತಷ್ಟು ಪರದಾಡಬೇಕಾಗುತ್ತದೆ.
ಹುಸಿ ಭರವಸೆ: ಟ್ಯಾಂಕ್ ರಿಪೇರಿ ಮಾಡ್ಸಿ ಎಲ್ರಿಗೂ ಕುಡ್ಯಾಕ ನೀರು ಕೊಡ್ತೀವಿ. ನಮಗ ವೋಟು ಹಾಕ್ರಿ ಎಂದು ಎಂಎಲ್‌ಎ ಚುನಾವಣ್ಯಾಗ ಯಾರ್ಯಾರೋ ಬಂದು ಭರವಸೆ ನೀಡಿದ್ದೇ ಹೊರತು ಆನಂತರ ತಮ್ಮತ್ರ ಯಾರೂ ಸುಳಿದಿಲ್ಲ ಎಂದು ಗ್ರಾಮಸ್ಥರಾದ ಯಲ್ಲಪ್ಪ, ಬಸವರಾಜ, ವೆಂಕಣ್ಣ ಆರೋಪಿಸಿದರು.
ಈ ಬಗ್ಗೆ ರಾಗಲಪರ್ವಿ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಗೆ ಮನವಿ ಮಾಡಿದಾಗ್ಯೂ ಯಾರೂ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಜನರಿಗೆ ಹಳ್ಳದ ನೀರೇ ಗತಿ ಎಂದು ಗ್ರಾಮಸ್ಥರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.