ತಾಪಂ ಎಂಜಿನಿಯರ್ಗಳಿಂದ ಅಕ್ರಮ?: ತನಿಖೆಗೆ ಆಗ್ರಹ
ರಾಯಚೂರು: ರಾಯಚೂರು ತಾಪಂ ಮತ್ತು ಮಾನವಿ ತಾಪಂ ಅಭಿಯಂತರರು ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಖೊಟ್ಟಿ ದಾಖಲೆಗಳನ್ನು ಸಿದ್ಧಪಡಿಸಿ ಅಕ್ರಮ ನಡೆಸಿದ್ದಾರೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಈ ಕುರಿತು ಇತ್ತೀಚೆಗೆ ಜಿಪಂ ಸಿಇಒ ಅವರಿಗೆ ದೂರು ಸಲ್ಲಿಸಿರುವ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಶರಣಪ್ಪ ದಿನ್ನಿ, ತಾಲೂಕು ಸಂಚಾಲಕ ಚನ್ನಬಸವ ಯಕ್ಲಾಸಪುರ, ಹನುಮಂತ ಅರೋಲಿ ಮತ್ತಿತರರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಜಿಲ್ಲೆಗೆ ಅನೇಕ ಯೋಜನೆಗಳಡಿ ಅನುದಾನ ದೊರೆತರೂ ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಯೋಜನೆಗಳ ಲಾಭ ಬಡವರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದರು.
ಅನುದಾನ ದುರ್ಬಳಕೆ: ರಾಯಚೂರು ತಾಪಂ ಎಇಇ ಮೋನಪ್ಪ ಮತ್ತು ಮಾನವಿ ತಾಪಂ ಎಇಇ ಪ್ರಕಾಶ್ ಅವರುಗಳು ನಿಯಮ ಉಲ್ಲಂಘಿಸಿ ಅನುದಾನ ದುರ್ಬಳಕೆ ಮಾಡಿದ್ದಾರೆ. ಎಇಇ ಮೋನಪ್ಪ ಮತ್ತು ಅವರ ಕಿರಿಯ ಎಂಜಿನಿಯರ್ಗಳು ಶಾಸಕರ ಅನುದಾನದಡಿ ಎಸ್ಸಿಪಿ ಯೋಜನೆ ಅಡಿ ಸಮುದಾಯ ಭವನ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ. ಎಸ್ಸಿ ಜನಾಂಗದವರಿರುವ ಪ್ರದೇಶದಲ್ಲಿ ನಿರ್ಮಿಸಬೇಕಾದ ಸಮುದಾಯ ಭವನವನ್ನು ರಾಯಚೂರು ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಬೇರೆಯವರು ವಾಸವಾಗಿರುವ ಪ್ರದೇಶದಲ್ಲಿ ನಿರ್ಮಿಸುತ್ತಿದ್ದಾರೆಂದು ದೂರಿದ್ದಾರೆ.
ಗ್ರಾಮಗಳಲ್ಲಿಯೂ ಅಕ್ರಮ: ಅದೇ ರೀತಿ ಗಂಜಳ್ಳಿ, ನಾಗಲಾಪುರ ಗ್ರಾಮಗಳಲ್ಲಿಯೂ ಅಕ್ರಮ ಎಸಗಿದ್ದಾರೆ. ಕುಕನೂರು ನಿಂದ ಮರ್ಚೆಡ್ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಹೆಸರಿನಲ್ಲಿ ರಸ್ತೆ ದುರಸ್ತಿ ಮಾಡದೇ ಅನುದಾನದ ಬಿಲ್ ಪಡೆಯಲಾಗಿದೆ. ಜಿಪಂನಿಂದ 13ನೇ ಹಣಕಾಸು ಯೋಜನೆಯಡಿ ಅದೇ ರಸ್ತೆಗೆ ಮರ್ಚೆಡ್ನಿಂದ ಕುಕನೂರು ವರೆಗೆ ರಸ್ತೆ ನಿರ್ಮಾಣ ಎಂದು ದಾಖಲಿಸಿ ಖೊಟ್ಟಿ ದಾಖಲೆ ತಯಾರಿಸಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಮಾನವಿ ತಾಲೂಕಿನ ತಾಪಂ ಎಇಇ ಪ್ರಕಾಶ್ ಅವರು ಸಂಸದರ ಅನುದಾನದಡಿ ಎಸ್ಸಿಪಿ ಯೋಜನೆಯಲ್ಲಿ ಕುರ್ಡಿ ಗ್ರಾಮದಲ್ಲಿ ಎಸ್ಸಿ ಜನಾಂಗದವರ ಪ್ರದೇಶದಲ್ಲಿ ಸಮುದಾಯ ಭವನ ನಿರ್ಮಿಸಿದ್ದು, ಇನ್ನುಳಿದ ಯೋಜನೆ ಅಡಿ ಕಾಮಗಾರಿ ಕೈಗೊಳ್ಳದೇ ಬಿಲ್ ಪಡೆದಿದ್ದಾರೆಂದು ಆರೋಪಿಸಿದ್ದಾರೆ.
ಹಿರಿಯ ಅಧಿಕಾರಿಗಳು ಎಂಜಿನಿಯರುಗಳು ನಡೆಸುತ್ತಿರುವ ಅಕ್ರಮದ ಬಗ್ಗೆ ತನಿಖೆ ನಡೆಸಲು ಮುಂದಾಗುತ್ತಿಲ್ಲ. ಕಾರಣ ಈ ಬಗ್ಗೆ ಕೂಡಲೇ ಜಿಪಂ ಸಿಇಒ ಜ್ಞಾನಪ್ರಕಾಶ್ ಅವರು ಈ ಇಬ್ಬರು ಎಂಜಿನಿಯರುಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಹೊಟ್ಟೆನೋವು; ಆತ್ಮಹತ್ಯೆ
ರಾಯಚೂರು: ತಾಲೂಕಿನ ಗಾಣದಾಳ ಗ್ರಾಮದಲ್ಲಿ ಹೊಟ್ಟೆನೋವಿನಿಂದ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಅಂಬಯ್ಯ ಎಂದು ಗುರುತಿಸಲಾಗಿದೆ. ಈತ ಹೊಟ್ಟೆ ನೋವಿನ ಬಾಧೆ ತಾಳದೇ ಕ್ರಿಮಿನಾಶಕ ಸೇವಿಸಿದ್ದು, ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಯುವಕ ಆತ್ಮಹತ್ಯೆ
ರಾಯಚೂರು: ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್ 3ರಲ್ಲಿ ತಾನು ಪ್ರೀತಿಸಿದ ಯುವತಿಯ ಪಾಲಕರು ಮದುವೆಗೆ ನಿರಾಕರಿಸಿದ್ದರಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಅಭಿಜಿತ್ ಸರದಾರ ಎಂದು ಗುರುತಿಸಲಾಗಿದೆ. ಈತ ತನ್ನ ಕ್ಯಾಂಪಿನ ಜ್ಯೋತಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಮದುವೆ ಮಾಡಿಕೊಡಲು ಆಕೆಯ ತಂದೆ, ಆಕೆಯ ವಯಸ್ಸಿನ ಕಾರಣವೊಡ್ಡಿ ನಿರಾಕರಿಸಿದ್ದರಿಂದ ಅಭಿಜಿತ್ ಕ್ರಿಮಿನಾಶಕ ಸೇವಿಸಿದ್ದು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.