ಬಸ್ ಸೌಲಭ್ಯವಿಲ್ಲದೆ ಪರದಾಟ
ಸಿಂಧನೂರು: ತಾಲೂಕಿನ ಜಾಲವಾಡಗಿ ಗ್ರಾಮದಲ್ಲಿ ಸಾರಿಗೆ ಸಂಸ್ಥೆಯವರು ನಿಗದಿತ ವೇಳೆಗೆ ಈ ಮಾರ್ಗದಲ್ಲಿ ಬಸ್ ಓಡಿಸದೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಬೆ.6.30ಕ್ಕೆ ಸರ್ಕಾರಿ ಬಸ್ ಊರಿಗೆ ಬರುತ್ತದೆ. ನಂತರ 11.30ಕ್ಕೆ ಅದೇ ಬಸ್ ಪುನಃ ಬರುತ್ತದೆ. ಅಪ್ಪಿತಪ್ಪಿ 6.30ಕ್ಕೆ ಬಸ್ ಒಪ್ಪಿಸಿಕೊಂಡರೆ ಅಂದಿನ ಹಲವು ತರಗತಿಗಳು ತಪ್ಪುತ್ತವೆ ಎಂದು ಗ್ರಾಮದ ಕಾಲೇಜು ವಿದ್ಯಾರ್ಥಿಯೊಬ್ಬ ಗೋಳಿಟ್ಟುಕೊಂಡನು.
ಸಿಂಧನೂರು- ಪೋತ್ನಾಳ್ ಬಳಗಾನೂರು ಮಾರ್ಗದಲ್ಲಿ ಒಂದೇ ಬಸ್ ಓಡಾಡುವುದರಿಂದ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಈ ಕಾರಣ ಅನೇಕ ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗುತ್ತಿದ್ದಾರೆ. ಅತ್ತ ಮಸ್ಕಿ ಪಟ್ಟಣಕ್ಕೂ ಸರಿಯಾದ ಬಸ್ ಸೌಲಭ್ಯ ಇಲ್ಲ. ಇತ್ತ ಸಿಂಧನೂರು ನಗರಕ್ಕೂ ಸಾರಿಗೆ ಸಂಸ್ಥೆ ನಿಗದಿತ ಸಮಯಕ್ಕೆ ಬಸ್ ಅನುಕೂಲ ಕಲ್ಪಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಅಡಕತ್ತರಿಯಲ್ಲಿ ಸಿಕ್ಕಂತಾಗಿದ್ದಾರೆ.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಮ್ಯಾನೇಜರ್ ಕರೇಗೌಡ ಅವರು ಈ ಬಗ್ಗೆ ಗಮನಹರಿಸಿ ಸಿಂಧನೂರು- ಪೋತ್ನಾಳ್ ಬಳಗಾನೂರು ಮಾರ್ಗದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಓಡಿಸಬೇಕು ಎಂದು ಒತ್ತಾಯಿಸಿದ್ದಾರೆ.