ಅನೈರ್ಮಲ್ಯ: ಪಪಂ.ಗೆ ಚುಚ್ಚುಮದ್ದು ಹಾಕಬೇಕಾದೀತು...!
ಕನ್ನಡಪ್ರಭ ವಾರ್ತೆ, ಮುದಗಲ್, ಜೂ.16
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಕಾರ್ಮಿಕರ, ಸಿಬ್ಬಂದಿ ಕಾರ್ಯ ವೈಖರಿಯಿಂದ ಪಟ್ಟಣದಲ್ಲಿ ನೈರ್ಮಲ್ಯ ಹಾಳಾಗುತ್ತಿರುವುದನ್ನು ಕಂಡ ಲಿಂಗಸ್ಗೂರು ಸಹಾಯಕ ಆಯುಕ್ತ ಟಿ. ಯೋಗೇಶ ಬೇಸರ ವ್ಯಕ್ತಪಡಿಸಿದರು.
ಭಾನುವಾರ ಪಪಂ ಕಾರ್ಯಾಲಯಕ್ಕೆ ಆಗಮಿಸಿದಾಗ ಮುಖ್ಯಾಧಿಕಾರಿಗಳು ಕಚೇರಿಯಲ್ಲಿ ಇರದೇ ಇರುವುದರಿಂದ ಅಲ್ಲಿಯೇ ಇದ್ದ ನಾಡ ಕಾರ್ಯಾಲಯಕ್ಕೆ ತೆರಳಿದರು. ಆದರೆ ಪಪಂ ಮುಂದೆ ಖಾಸಗಿ ಬೈಕ್ಗಳು, ಕಾರುಗಳು ನಿಂತಿರುವುದರಿಂದ ಅಧಿಕಾರಿಗಳ ವಾಹನ ಕೂಡ ಬರದಂತಾಗಿತ್ತು. ಇದರಿಂದ ಕೆಂಡಾಮಂಡಲವಾದ ಅವರು, ಖಾಸಗಿ ವಾಹನಗಳು ಕಚೇರಿ ಆವರಣಲ್ಲಿ ನಿಲ್ಲದಂತೆ ಕ್ರಮ ಕೈಕೊಳ್ಳಬೇಕೆಂದು ನಾಡ ಕಾರ್ಯಾಲಯದ ಅಧಿಕಾರಿಗಳಿಗೆ ಮತ್ತು ಪಪಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಎಸಿ ಕೆಂಡಾಮಂಡಲ: ಪಟ್ಟಣದಲ್ಲಿಯ ನೈರ್ಮಲ್ಯ ವ್ಯವಸ್ಥೆಯನ್ನು ವೀಕ್ಷಿಸಲು ಮುಂದಾದಾಗ ಖಾಸಗಿ ಆಸ್ಪತ್ರೆಯ ಮುಂದೆ ಬಿದ್ದಿರುವ ಕಸವನ್ನು ನೋಡಿ ನಿಬ್ಬೆರೆಗಾದರು. ಅಲ್ಲದೆ ಕಸದಲ್ಲಿ ಸೂಜಿ ಮತ್ತು ಔಷಧ ಹಾಳೆಯ ಜೊತೆಗೆ ಕಸಕ್ಕೆ ಬೆಂಕಿ ಹಚ್ಚಿರುವುದನ್ನು ನೋಡಿ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯಾಧಿಕಾರಿಗಳು ಸಮಜಾಯಿಷಿ ನೀಡಲು ಮುಂದಾದರು. ಇದಕ್ಕೆ ಜಗ್ಗದ ಎಸಿಯವರು ನೀವು ಎಷ್ಟು ಆಸ್ಪತ್ರೆಗಳಿಗೆ ಕ್ರಮ ಕೈಕೊಳ್ಳಲು ನೋಟಿಸ್ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಅಲ್ಲದೆ ಇಲ್ಲಿ ಆಸ್ಪತ್ರೆಯ ಕಸವನ್ನು ಚೆಲ್ಲುವವರಿಗೆ ನೋಟಿಸ್ ನೀಡಿ, ಐಎಂಎ ಘಟಕದಲ್ಲಿ ತಿಂಗಳಿಗೊಮ್ಮೆ ನೈರ್ಮಲ್ಯ ಕಾಪಾಡುವ ಸಭೆ ಮಾಡಲಾಗುತ್ತಿದೆ ನಿಮಗೆ ಇದು ತಿಳಿದಿರಲಿ. ಇಲ್ಲಿ ಆಸ್ಪತ್ರೆಗಳ ಸೂಜಿ, ಸೀರಿಂಜ್, ಪ್ಲಾಸ್ಟಿಕ್, ಆಸ್ಪತ್ರೆಯ ಕಸವನ್ನು ಚೆಲ್ಲುವವರ ಮೇಲೆ ನೀವೇ ಕ್ರಮ ಕೈಕೊಳ್ಳಬೇಕು. ಇಲ್ಲವಾದರೆ ನಾವು ನಿಮ್ಮ ಮೆಲೆ ಕ್ರಮ ಕೈಕೊಳ್ಳಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಸ್ವಚ್ಛತೆ ಜವಾಬ್ದಾರಿ ಪಪಂ.ಯದ್ದು: ಪಟ್ಟಣದಲ್ಲಿಯ ಕರಿಗಾರ ಓಣಿ, ಎಸ್ವಿಎಂ ಶಾಲೆ, ಸರ್ಕಾರಿ ಆಸ್ಪತ್ರೆ ಹತ್ತಿರದ ರಸ್ತೆಯಲ್ಲಿ ಸಂಚರಿಸಿದರು. ಪಪಂ ದಫೇದಾರ ಚೆನ್ನಪ್ಪ ಚರಂಡಿ ಸ್ವಚ್ಛತೆ ಮಾಡಿಸಿರುವದನ್ನು ಸಹಾಯಕ ಆಯುಕ್ತರಿಗೆ ತೋರಿಸಿದರು. ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಮ್ಮ ಹಿರಿಯ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿ ತಾವೇ ಖುದ್ದು ಕಾರ್ಯ ನಿರ್ವಹಿಸುತ್ತಿರುವಾಗ ನಾವುಗಳೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದರೆ ಶಿಕ್ಷೆಗೆ ಮುಂದಾಗಬೇಕಾಗತ್ತದೆ. ಪಟ್ಟಣದ ಸೌಂದರ್ಯೀಕರಣ, ಸ್ವಚ್ಛತೆಯ ಜವಾಬ್ದಾರಿ ಪಪಂ ಹೆಗಲ ಮೇಲಿದೆ. ನಾವು ಸರ್ಕಾರಿ ನೌಕರರೇ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಸಬೂಬು ಹೇಳ್ಬೇಡಿ, ನೀವೇ ಮಾಡಬೇಕು: ಒಂದು ವಾರದೊಳಗೆ ಪಟ್ಟಣದ ಸ್ವಚ್ಛತೆಗೆ ನೀವೇ ಕ್ರಮ ಕೈಕೊಳ್ಳಬೇಕು. ಇಲ್ಲವಾದರೆ ನೋಟಿಸ್ ನೀಲಾಗುವದು ಎನ್ನುತ್ತಿದ್ದಂತೆ ಸ್ಥಳದಲ್ಲಿದ್ದ ದಫೇದಾರ ಚೆನ್ನಪ್ಪ, 130 ಚರಂಡಿಗಳಿದ್ದು ಕೇವಲ 12 ಕಾರ್ಮಿಕರಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಸಹಾಯಕ ಆಯುಕ್ತರಿಗೆ ಸಮಜಾಯಿಷಿ ಹೇಳಿದರು. ಅದೇನೇ ಹೇಳಿದರೂ ಪಟ್ಟಣದ ಸ್ವಚ್ಛತೆ ಜವಾಬ್ದಾರಿ ನಿಮ್ಮ ಮೇಲಿದೆ ನೀವೇ ಮಾಡಬೇಕೆಂದು ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ರಸ್ತೆ ಅಗಲೀಕರಣದ ನಂತರ ನಡೆಯುತ್ತಿರುವ ಕಾಮಗಾರಿಗಳ ಮೇಲೆ ನಿಗಾ ವಹಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿಯ ಮಣ್ಣು ಕಲ್ಲುಗಳನ್ನು ಗುತ್ತಿಗೆದಾರರಿಂದಲೇ ತೆಗೆಯಿಸಬೇಕು ಎಂದು ಎಸಿ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಗುತ್ತಿಗೆದಾರರು ಸಮರ್ಪಕವಾಗಿ, ಕಾಲಾವಕಾಶದ ಒಳಗೆ ಕಾಮಗಾರಿ ನಿರ್ವಹಿಸದಿದ್ದರೆ ಅವರ ಬಿಲ್ಗಳನ್ನು ತಡೆ ಹಿಡಿಯಿರಿ. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ತಾಕೀತು ಮಾಡಿದರು.
ಬೆಳಗದ ಬೀದಿ ದೀಪ
ಮುದಗಲ್: ಪಟ್ಟಣದ ರಾಯಚೂರು-ಬಾಗಲಕೋಟೆ ಮುಖ್ಯ ರಸ್ತೆಯಲ್ಲಿ ಆಳವಡಿಸಲಾದ ಬೀದಿ ದೀಪಗಳು ಬೆಳಗದೆ ಇರುವುದರಿಂದ ಸಾರ್ವಜನಿಕರು ಕತ್ತಲೆಯಲ್ಲಿ ಸಂಚರಿಸಬೇಕಾಗಿದೆ. 2007-08ನೇ ಸಾಲಿನಲ್ಲಿ ಎಸ್ಎಫ್ಸಿ ಯೋಜನೆಯಡಿ ಸುಮಾರು ರು. 15 ಲಕ್ಷ ವೆಚ್ಚದಲ್ಲಿ 30ಕ್ಕೂ ಅಧಿಕ ಕಂಬಗಳನ್ನು ಅಳವಡಿಸಿ ಬೀದಿ ದೀಪಗಳನ್ನು ಆಳವಡಿಸಲಾಗಿದೆ. 2008-09ನೇ ಸಾಲಿನಲ್ಲಿ ಇದೇ ಕಂಬಗಳಿಗೆ ಆಳವಡಿಸಲು ರು. 5 ಲಕ್ಷದ ವಿದ್ಯುತ್ ದೀಪಗಳನ್ನು ಖರೀದಿಸಿದ್ದು, ಅವು ಬೆಳಗುತ್ತಿಲ್ಲ. ಪಪಂ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.