ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಪಘಾತ: ಬಿಜೆಪಿ ಮುಖಂಡ ಸಾವು

Lingaraj Badiger
Updated On : 17 Jun 2013, 11:10 am

ಕನ್ನಡಪ್ರಭ ವಾರ್ತೆ, ಸೇಡಂ, ಜೂ.16
ತಾಲೂಕಿನ ಕೊಲಕುಂದಾ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂಜೀವರೆಡ್ಡಿ ಹಯ್ಯಾಳ ರಸ್ತೆ ಅಪಘಾತದಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಪಟ್ಟಣದಲ್ಲಿನ ವಾಗ್ದಾರಿ ರಿಬ್ಬನ್ಪಲ್ಲಿ ರಾಜ್ಯ ಹೆದ್ದಾರಿಯಲ್ಲಿ ಬೈಕ್ನಲ್ಲಿ ಬರುತ್ತಿರುವಾಗ ಎದುರಿನಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತ ಸ್ರಾವಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಮೊದಲಿನ ಅವಧಿಯಲ್ಲಿ ಪತ್ನಿ ಪ್ರಮೀಳಾ ಹಯ್ಯಾಳ ಕೊಲಕುಂದಾ ಜಿಪಂ ಕ್ಷೇತ್ರದ ಸದಸ್ಯೆಯಾಗಿದ್ದರು. ಪ್ರಸ್ತುತ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಇವರು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ತಮ್ಮ ಸ್ವಗ್ರಾಮ ಹಂದರಕಿಯಿಂದ ಹೆಚ್ಚಿನ ಮತ ನೀಡುವಲ್ಲಿ ಸಫಲರಾಗಿದ್ದರು. ಅವರ ಅಗಲಿಕೆಯು ಬಿಜೆಪಿಗೆ ನಷ್ಟ ಉಂಟುಮಾಡಿದೆ.
ಸಂತಾಪ ಸೂಚನೆ: ಸಂಜೀವರೆಡ್ಡಿ ಸಾವಿಗೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೆಲ್ಕೂರ, ತಾಲೂಕಾಧ್ಯಕ್ಷ ನಾಗೇಂದ್ರಪ್ಪ ದುಗನೂರ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹ್ಮದ್ ಮುನೀಬ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮುಕ್ರಂಖಾನ್, ಮುಖಂಡರಾದ ಶ್ರೀಧರ ಐನಾಪುರ, ಬಸವರಾಜ ರೆವಗೊಂಡ ಸಂತಾಪ ಸೂಚಿಸಿದ್ದಾರೆ.

ಅಪರಿಚಿತ ಯುವಕನ ಕೊಲೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.16
ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿದ ಘಟನೆ ಹೀರಾಪುರ ಹೊರವಲಯದ ಮಾದರಸನಹಳ್ಳಿಯಲ್ಲಿ ನಡೆದಿದೆ. 20 ರಿಂದ 25 ವರ್ಷ ವಯಸ್ಸಿನ ಅಪರಿಚಿತ ಯುವಕನನ್ನು ಕೊಲೆಗಾರರು ಐದಾರು ದಿನಗಳ ಹಿಂದೆ ಕೊಲೆಗೈದು ಸಾಕ್ಷಿನಾಶ ಪಡಿಸುವ ಉದ್ದೇಶದಿಂದ ಶವವನ್ನು ಶಾಲಿನಲ್ಲಿ ಕಟ್ಟಿ ಮಾದರಸನಹಳ್ಳಿಯ ಕುಪೇಂದ್ರ ಬಿರಾದಾರ ಅವರ ಕಬ್ಬಿನ ಗದ್ದೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ನಾಟಿ ಮಾಡಿದ ಕಬ್ಬಿಗೆ ನೀರು ಬಿಡಲೆಂದು ಕುಪೇಂದ್ರ ಹೋದಾಗ ಗದ್ದೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಕೊಲೆಯಾದ ಯುವಕನ ಶವ ಕೊಳೆತು ಹೋಗಿದ್ದು, ಗುರುತು ಸಿಗದಂತಾಗಿದೆ. ಕೊಲೆಯಾದ ಯುವಕನ ಬಲಗೈ ರಟ್ಟೆಯ ಮೇಲೆ ಹನುಮಾನ ದೇವರ ಅಚ್ಚೆ ಗುರುತಿದೆ. ಯುವಕನ ಬಗ್ಗೆ ಯಾರಿಗಾದರು ಮಾಹಿತಿ ಇದ್ದರೆ ಅವರು ಗ್ರಾಮೀಣ ಠಾಣೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕಿಸಲು ಕೋರಲಾಗಿದೆ.
ತಲೆಸುತ್ತು: ಕಾವಲುಗಾರ ಸಾವು
ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತಲೆಸುತ್ತಿನಿಂದ ಕಟ್ಟೆ ಮೇಲಿಂದ ಕೆಳಗೆ ಬಿದ್ದು ಸಾವಿಗೀಡಾದ ಘಟನೆ ಮೆಹಬೂಬ್ ನಗರದಲ್ಲಿ ನಡೆದಿದೆ. ಸೈಯದ್ ಅಮೀರುದ್ದೀನ್ (55) ಎಂಬಾತನೇ ಮೃತಪಟ್ಟಿದ್ದಾನೆ. ಈ ಕಾವಲುಗಾರನಿಗೆ ಅಧಿಕ ರಕ್ತದೊತ್ತಡ ಇತ್ತೆಂದು ಹೇಳಲಾಗಿದ್ದು, ಶನಿವಾರ ರಾತ್ರಿ ಕಟ್ಟೆ ಮೇಲೆ ಕುಳಿತಾಗ ತಲೆಸುತ್ತು ಬಂದು ಬಿದ್ದು ಸಾವಿಗೀಡಾಗಿದ್ದು, ಈ ಕುರಿತು ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement