ಎಚ್ಕೆಪಿ ನೇತೃತ್ವ ಖಂಡಿಸಿ ಬೊಬ್ಬೆ ಚಳವಳಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.16
ಸಂವಿಧಾನದ 371 (ಜೆ) ವಿಧಿಗೆ ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರ ನೇಮಿಸಿದ ಉಪಸಮಿತಿಗೆ ಸಚಿವ ಎಚ್.ಕೆ. ಪಾಟೀಲ್ ನೇತೃತ್ವ ವಹಿಸಿರುವುದನ್ನು ಖಂಡಿಸಿ, ಸರ್ಕಾರದ ಕ್ರಮವನ್ನು ವಿರೋಧಿಸಿ ಹೈ.ಕ. ಪ್ರದೇಶದ ಹೋರಾಟಗಳ ಸಮನ್ವಯ ಸಮಿತಿ ಕಾರ್ಯಕರ್ತರು ಭಾನುವಾರ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರ ಗುಲ್ಬರ್ಗದ ಮನೆ ಎದುರು ಬೊಬ್ಬೆ ಚಳವಳಿ ನಡೆಸಿದರು.
ಹೈ.ಕ. ಪ್ರದೇಶದ ಜನಪ್ರತಿನಿಧಿಗಳನ್ನೇ ಉಪ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು, ಎಚ್.ಕೆ. ಪಾಟೀಲ್ ಈ ಹಿಂದೆ ಸಚಿವರಾಗಿದ್ದ ಅವಧಿಯಲ್ಲಿ ವಿಶೇಷ ಸ್ಥಾನಮಾನ ಎಲ್ಲ ಹಿಂದುಳಿದ ಪ್ರದೇಶಕ್ಕೆ ದೊರೆಯಲಿ ಎಂಬ ಬಹುದಿನಗಳ ಬೇಡಿಕೆಯನ್ನು ನೆನೆಗುದಿಗೆ ಹಾಕಿದ್ದರು. ಇಂತಹ ವ್ಯಕ್ತಿಯಿಂದ ನ್ಯಾಯ ಸಿಗುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಹೈ.ಕ. ಭಾಗದಿಂದ ನಾಲ್ಕು ಸಚಿವರಿದ್ದರೂ ಉಪ ಸಮಿತಿ ಅಧ್ಯಕ್ಷತೆ ಬೇರೆಯವರಿಗೆ ವಹಿಸಿರುವುದರಿಂದ ಈ ಭಾಗದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಕೂಡಲೇ ಈ ಭಾಗದ ಬಗ್ಗೆ ಕಳಕಳಿ ಇರುವ ಸಚಿವರನ್ನು ಮಾತ್ರ ಉಪ ಸಮಿತಿಯಲ್ಲಿ ಸೇರಿಸಬೇಕು. ಕೂಡಲೇ ಎಚ್.ಕೆ. ಪಾಟೀಲ್ ಅವರನ್ನು ಸಮಿತಿ ಅಧ್ಯಕ್ಷ ಸ್ಥಾನದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಚಳವಳಿಯಲ್ಲಿ ಹೋರಾಟ ಸಮಿತಿ ಮಹಾಪ್ರಧಾನ ಕಾರ್ಯದರ್ಶಿ ಲಿಂಗರಾಜ ಸಿರಗಾಪುರ, ಮುಖಂಡರಾದ ಸಂದೀಪ ಪಾಟೀಲ್, ಮನೋಹರ ಬೀರನೂರ, ಹಾಜಿಸಾಬ್ ಭಾಗವಾನ, ಮಹ್ಮದ್ ಆಯುಬ್, ವಿಶಾಲದೇವ ಧನ್ನಿಕರ್, ಶೇಖ ಅಹ್ಮದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.