ಪತ್ನಿಯಿಂದಲೇ ಪತಿಯ ಕೊಲೆ
ರಾಯಚೂರು: ತಾಲೂಕಿನ ಯದ್ಲಾಪುರದಲ್ಲಿ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿ ಕೊಲೆ ಮಾಡಿದ್ದಾಳೆ. ಮೃತನನ್ನು ರಾಮಪ್ಪ ಎಂದು ಗುರುತಿಸಲಾಗಿದೆ. ಈತನ ಪ್ರತಿ ದಿನ ಮದ್ಯ ಸೇವಿಸಿ ಮನೆಗೆ ಬಂದು ತನ್ನ ಪತ್ನಿ ಮರಿಯಮ್ಮ ಎಂಬಾಕೆ ಜತೆಗೆ ಜಗಳವಾಡುತ್ತಿದ್ದ. ಅದರಿಂದ ಬೇಸತ್ತಿದ್ದ ಆಕೆ ಬೇರೆ ಮನೆ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದಳು. ಆದರೆ ವಾರಕ್ಕೊಮ್ಮೆ ಗಂಡನ ಮನೆಗೆ ಬಂದು ತನ್ನ ಆಸ್ತಿ ನೀಡುವಂತೆ ಒತ್ತಾಯಿಸುತ್ತಿದ್ದಳು. ಆದರೆ ಆತ ಆಸ್ತಿಯಲ್ಲಿ ಪಾಲು ನೀಡದ್ದರಿಂದ ಬೇಸರಗೊಂಡ ಆಕೆ ಆತನ ಕಿರುಕುಳ ತಾಳದೇ ಆತ ರಾತ್ರಿ ವೇಳೆ ಮಲಗಿದ್ದಾಗ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆಂದು ಪೊಲೀಸರಿಗೆ ದೂರಲಾಗಿದೆ. ಈ ಕುರಿತು ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಬಿತ್ತನೆ ಬೀಜ; ಒಬ್ಬನ ಬಂಧನ
ರಾಯಚೂರು: ದೇವದುರ್ಗ ತಾಲೂಕಿನ ಹೊನ್ನಕಾಟಮಳ್ಳಿ ಗ್ರಾಮದಲ್ಲಿ ನಕಲಿ ಬಿತ್ತನೆ ಬೀಜ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಗ್ರಾಮದ ಶಿವಪ್ಪ ಎಂದು ಗುರುತಿಸಲಾಗಿದೆ. ಈತ ನಕಲಿ ಬೀಜಗಳನ್ನು ಅಸಲಿ ಬೀಜಗಳೆಂದು ನಂಬಿಸಿ ರೈತರಿಗೆ ಮೋಸ ಮಾಡುವ ಉದ್ದೇಶದಿಂದ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ದಾಳಿ ಮಾಡಿ ಈತನನ್ನು ಹಿಡಿದು ಆತನಲ್ಲಿದ್ದ 10,200 ಬೆಲೆಯ 34 ಪ್ಯಾಕೇಟ್ ನಕಲಿ ಹತ್ತಿ ಬಿತ್ತನೆ ಬೀಜವನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಶವ ಪತ್ತೆ
ರಾಯಚೂರು: ರಾಯಚೂರು ತಾಲೂಕಿನ ರಾಯಚೂರು- ಮರ್ಚಟ್ಟಾಳ್ ರೇಲ್ವೆ ನಿಲ್ದಾಣಗಳ ಮಧ್ಯೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ವ್ಯಕ್ತಿಯು ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಸುಮಾರು 60 ವರ್ಷ ವಯಸ್ಸಿನ ಈ ವ್ಯಕ್ತಿಯ ಶವ ಹಳಿಯ ಮೇಲೆ ಪತ್ತೆಯಾಗಿದೆ ಎಂದು ರೇಲ್ವೆ ಪೊಲೀಸರು ತಿಳಿಸಿದ್ದಾರೆ.