ಸೌಲಭ್ಯ ವಂಚಿತ ಸರ್ಕಾರಿ ಆಸ್ಪತ್ರೆ; ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜೂ.16
ಸ್ಥಳೀಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಹಾಗೂ ಸೌಲಭ್ಯಗಳ ಕೊರತೆಯಿಂದ ವಂಚಿತಗೊಂಡಿದ್ದು, ಇದರಿಂದ ರೋಗಿಗಳು ಪರದಾಡುವಂತಾಗಿದೆ. ಕೂಡಲೇ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಮತ್ತು ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಮಹಾಂತಪ್ಪ ವಿಟ್ಲಾಪೂರ ಆಗ್ರಹಿಸಿದ್ದಾರೆ.
ಜನರ ನಿರೀಕ್ಷೆಯ ಕಾರ್ಯ ಅಸಾಧ್ಯ: ಪಟ್ಟಣದ ನೂರು ಹಾಸಿಗೆಯ ಆಸ್ಪತ್ರೆಗೆ ವಿವಿಧ ಜಿಲ್ಲೆ, ತಾಲೂಕಿನ ಜನರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದರೆ ವಿವಿಧ ತಜ್ಞ ವೈದ್ಯರು ಹಾಗೂ ಮೂಲ ಸೌಕರ್ಯಗಳಿಲ್ಲದೆ ರೋಗಿಗಳು ಪರದಾಡುವಂತಾಗಿದೆ ಹಾಗೂ ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಸ್ತ್ರೀರೋಗ, ಚರ್ಮ ರೋಗ, ನೇತ್ರ, ದಂತ, ಫಿಜಿಷಿಯನ್ ತಜ್ಞ ವೈದ್ಯರ ಹಾಗೂ 2 ಹಿರಿಯ ಮತ್ತು 1 ಕಿರಿಯ ಫಾರ್ಮಾಸಿಸ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಚರ್ಮರೋಗ ತಜ್ಞ ವೈದ್ಯರು, ರೇಡಿಯೋಗ್ರಾಫರ್, ಪ್ರಯೋಗ ಶಾಲಾ ತಂತ್ರಜ್ಞರು, ಕಾರ್ಯಾಲಯದ ಅಧೀಕ್ಷಕರು, ನಸಿಂಗ್ ಅಧೀಕ್ಷಕರು, ರಿಫ್ ರಾಕ್ಷನಿಷ್ಟ್, ಗ್ರೂಪ್ ಡಿ ಹುದ್ದೆಗಳನ್ನು ಹೊಸದಾಗಿ ಮಂಜೂರಾತಿ ದೊರೆಯಬೇಕು.
ರಕ್ತದ ಸರಬರಾಜು ಮಾಡಿ: ಅಲ್ಲದೆ ಕಿವಿ, ಮೂಗು, ಗಂಟಲು ತಜ್ಞರಿಗೆ ಇ.ಎನ್.ಟಿ ಮೈಕ್ರೊಸ್ಕೋಪ್ ಹಾಗೂ ನಾಜಲ್ ಎಂಡೋಸ್ಕೋಪ್ ಹಾಗೂ ಜಿಲ್ಲಾ ಮದರ್ ಬೋಡ್ ಬ್ಯಾಂಕಿನಿಂದ ರಕ್ತದ ಸರಬರಾಜು ಮಾಡಬೇಕು. ಸಿಟಿ ಸ್ಕ್ಯಾನ್ ಘಟಕದ ಸ್ಥಾಪನೆಗೆ ನಿರ್ಣಯ ಕೈಗೊಳ್ಳಬೇಕು. ಶವ ಪರೀಕ್ಷಾ ಕೋಣೆ, ವಸತಿ ಗೃಹಗಳ ನಿರ್ಮಾಣ, ತ್ಯಾಜ್ಯ ವಿಲೇವಾರಿಗೆ 2 ಎಕರೆ ಭೂಮಿ ಒದಗಿಸಬೇಕು.
ಹೊರ ಮತ್ತು ಒಳ ರೋಗಿಗಳ ಹೆಚ್ಚುವರಿ ಗಮನಿಸಿ ವಾರ್ಷಿಕ ಹೆಚ್ಚುವರಿ ಔಷಧಿ ಬಿಡುಗಡೆ ಮಾಡಬೇಕು. ಒಳ ರೋಗಿಗಳಿಗೆ ಬ್ಲಾಂಕೆಟ್ ಸರಬರಾಜು ಮಾಡಬೇಕು. ಅಪಘಾತಕ್ಕೊಳಗಾದವರಿಗೆ ಹಾಗೂ ಗರ್ಭಿಣಿಯರಿಗೆ ಮಚ್ಚರದಾನಿ ಸರಬರಾಜು ಮಾಡಬೇಕು. ಕುಡಿಯುವ ನೀರು ಶುದ್ಧೀಕರಿಸಬೇಕು. ಬಿಆರ್ಜಿಎಫ್ ಯೋಜನೆ ಅನುದಾನ ಆಸ್ಪತ್ರೆ ಬೇಡಿಕೆ ಪಟ್ಟಿ ಪಡೆದು ವಸ್ತುಗಳ ಖರೀದಿಗೆ ಮುಂದಾಗಬೇಕು. ಡಯಾಲಿಸಸ್ ಘಟಕ ಸ್ಥಾಪನೆಗೆ ಮಂಜೂರಾತಿ ಪಡೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.