ಕೃಷಿ ಇಲಾಖೆ ಅರ್ಧ ಖಾಲಿ!
ಕನ್ನಡಪ್ರಭ ವಾರ್ತೆ , ರಾಯಚೂರು , ಜೂ.17
ಜಿಲ್ಲೆಯು ಕೃಷ್ಣಾ ಮತ್ತು ತುಂಗಭದ್ರಾ ನದಿ ನೀರಾವರಿ ಯೋಜನೆಗಳ ಅಡಿ ಲಕ್ಷಾಂತರ ಹೆಕ್ಟೇರ್ ನೀರಾವರಿಯಾಗಿದೆ. ಪರಿಣಾಮ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರ ಹೆಚ್ಚು ಪ್ರಾಧಾನ್ಯತೆ ಗಳಿಸಿದೆ. ಆದರೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸರ್ಕಾರಿ ಇಲಾಖೆಯಲ್ಲಿ ಮಾತ್ರ ಅರ್ಧದಷ್ಟು ಹುದ್ದೆಗಳು ಭರ್ತಿಯಾಗದೇ ಉಳಿದಿವೆ. ಹಾಗಾಗಿ ರೈತರಿ ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗುವಂತಾಗಿದೆ.
ವರ್ಷದಿಂದ ವರ್ಷಕ್ಕೆ ಕೃಷಿ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಆದರೆ ಭರ್ತಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಜಿಲ್ಲೆಗೆ ಆಗಮಿಸುವ ಎಲ್ಲ ಸಚಿವರು, ಸಿಎಂಗಳಿಗೆ ಇದುವರೆಗೆ ಖಾಲಿ ಹುದ್ದೆಗಳ ಭರ್ತಿಗೆ ಮನವಿ ಸಲ್ಲಿಸಲಾಗುತ್ತಿದೆ. ಆದರೆ ಕ್ರಮ ಮಾತ್ರ ಜರುಗುತ್ತಿಲ್ಲ.
2,99,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ: ಜಿಲ್ಲೆಯಲ್ಲಿ ಒಟ್ಟು 2,99,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ. ಇದರಲ್ಲಿ 1,59,500 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಹಾಗೂ 1.40 ಲಕ್ಷ ಹೆಕ್ಟೇರ್ ನೀರಾವರಿಯಾಗಿದೆ. ಜಿಲ್ಲೆಯಲ್ಲಿ 37 ರೈತ ಸಂಪರ್ಕ ಕೇಂದ್ರಗಳಿವೆ. ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟಕ್ಕೆ ಅಗತ್ಯ ದಾಸ್ತಾನಿದ್ದರೂ ಅದರ ಹಂಚಿಕೆಗೆ ಕೃಷಿ ಇಲಾಖೆಯಲ್ಲಿ ಸೂಕ್ತ ಸಂಖ್ಯೆಯ ಸಿಬ್ಬಂದಿಯಿಲ್ಲವಾಗಿರುವುದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಂಕಷ್ಟ ತಂದಿದೆ.
ಮಂಜೂರಾದ ಹುದ್ದೆಗಳು 150: ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಒಟ್ಟು ಮಂಜೂರಾದ ಹುದ್ದೆಗಳ ಸಂಖ್ಯೆ 285. ಅದರಲ್ಲಿ ಸದ್ಯ 135 ಹುದ್ದೆಗಳಲ್ಲಿ ಮಾತ್ರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 150 ಹುದ್ದೆಗಳು ಖಾಲಿ ಉಳಿದಿವೆ.
ಜಿಲ್ಲೆಗೆ ಮಂಜೂರಾದ 10 ಸಹಾಯಕ ನಿರ್ದೇಶಕರ ಹುದ್ದೆಗಳಲ್ಲಿ ಐದು ಖಾಲಿಯಿವೆ. ಆಡಳಿತಾಧಿಕಾರಿ-01, ಕೃಷಿ ಅಧಿಕಾರಿ- 54, ಕೃಷಿ ಅಧಿಕಾರಿ (ರೈತ ಮಹಿಳೆ)-3, ಅಧೀಕ್ಷಕರು-5, ಕೃಷಿ ಸಹಾಯಕರು-20, ಬೆರಳಚ್ಚುಗಾರರು-7, ವಾಹನ ಚಾಲಕರು-3, ಗ್ರೂಪ್ ಡಿ ನೌಕರರು-9, ಸಹಾಯಕ ಕೃಷಿ ಅಧಿಕಾರಿ-36 ಹುದ್ದೆಗಳು ಖಾಲಿ ಉಳಿದಿವೆ.
ಹೀಗಾಗಿ ಲಭ್ಯವಿರುವ ಸಿಬ್ಬಂದಿಯನ್ನೇ ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ರೈತರಿಗೆ ಮಾಹಿತಿ ನೀಡಲು ಬಳಸಿಕೊಳ್ಳುವಂಥ ಸ್ಥಿತಿಯಿದೆ.
ರೈತರ ಬೇಡಿಕೆಗೆ ಸ್ಪಂದಿಸುವ ಕಾರ್ಯ: ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಅದರಿಂದ ಕಾರ್ಯನಿರ್ವಹಣೆಗೆ ತೊಂದರೆಯಾಗಿದೆ. ಆದರೆ ಲಭ್ಯವಿರುವ ಸಿಬ್ಬಂದಿಯನ್ನೇ ಬಳಸಿಕೊಂಡು ರೈತರ ಬೇಡಿಕೆಗೆ ತಕ್ಕಂತೆ ಸ್ಪಂದಿಸುವ ಕಾರ್ಯ ಇಲಾಖೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು, ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಗೆ ಮುಗಿಬಿದ್ದಿದ್ದಾರೆ. ಮತ್ತೊಂದೆಡೆ ನಕಲಿ ಹತ್ತಿ ಬಿತ್ತನೆ ಬೀಜ ಮಾರಾಟದ ಐದಾರು ಪ್ರಕರಣಗಳು ಈಚೆಗೆ ಪತ್ತೆ ಹಚ್ಚಲಾಗಿದೆ.
ಕೃಷಿ ಇಲಾಖೆ ಈಗ ಎಚ್ಚೆತ್ತಿದ್ದು ಇಬ್ಬರು ಅಧಿಕಾರಿಗಳ ತಂಡವನ್ನು ನಕಲಿ ಹತ್ತಿ ಬಿತ್ತನೆ ಬೀಜ ಮಾರಾಟ ತಡೆಗೆ ನೇಮಿಸಲಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಅಕ್ರಮ ಪತ್ತೆಗೆ ತೊಡಗಿಸದಂಥ ಅನಿವಾರ್ಯ ಪರಿಸ್ಥಿತಿಗೆ ಇಲಾಖೆ ಸಿಲುಕಿದೆ.
ಪರಿಣಾಮ ಸರ್ಕಾರದಿಂದ ರೈತರಿಗೆ ದೊರೆಯುವ ವಿವಿಧ ಯೋಜನೆಗಳ ಲಾಭ ದೊರೆಯುತ್ತಿಲ್ಲ. ಜತೆಗೆ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಕಾಲಮಿತಿಯಲ್ಲಿ ಕಾರ್ಯನಿರ್ವಹಣೆಗೆ ಬಹುದೊಡ್ಡ ಅಡಚಣೆಯಾಗಿದೆ.
- ಜಗನ್ನಾಥ ಆರ್. ದೇಸಾಯಿ