ನಗರದಲ್ಲಿ ಬಿಡಾಡಿ ದನಗಳ ಹಾವಳಿ
ಸಿಂಧನೂರು: ನಗರದ ಮುಖ್ಯ ರಸ್ತೆಗಳಲ್ಲಿ ಸದಾ ಸಂಚರಿಸುವ ಬಿಡಾಡಿ ದನಗಳಿಂದಾಗಿ ವಾಹನ ಸವಾರರು ಸಮಸ್ಯೆಗೆ ಸಿಲುಕಿದ್ದಾರೆ. ಪ್ರಮುಖ ವೃತ್ತಗಳಾದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಕನಕದಾಸ ವೃತ್ತದ ಹತ್ತಿರ ಸದಾ ಬಿಡಾಡಿ ದನಗಳ ದಂಡು ಬೀಡು ಬಿಟ್ಟಿರುತ್ತದೆ. ಕನಕದಾಸ ವೃತ್ತದಲ್ಲಿ ತರಕಾರಿ ವ್ಯಾಪಾರಿಗಳು ಬಿಸಾಡಿರುವ ತರಕಾರಿಗಳಿಗಾಗಿ ಬರುವ ದನಗಳು ಅಲ್ಲಿಯೇ ತಿಂದು ಮಲಗುತ್ತವೆ. ಇದರಿಂದಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ದೊಡ್ಡ ವಾಹನಗಳು ಬಂದರೆ ಅವುಗಳನ್ನು ಅಲ್ಲಿಂದ ಓಡಿಸುವಷ್ಟರಲ್ಲಿ ಸುಸ್ತಾಗುವ ಪರಿಸ್ಥಿತಿ ಎದುರಾಗಿದೆ. ಇಷ್ಟಲ್ಲದೆ ರಾಯಚೂರು ರಸ್ತೆಯಲ್ಲಿರುವ ರಸ್ತೆ ವಿಭಜಕಗಳಲ್ಲಿ ದನಗಳು ಸದಾ ಮಲಗಿರುತ್ತವೆ. ಯಾವಾಗ ಅಲ್ಲಿಂದ ಎದ್ದು ಬರುತ್ತವೆ ತಿಳಿಯದಂತಾಗಿದೆ. ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಒಮ್ಮಿಂದೊಮ್ಮೆಲೆ ದನಗಳು ಎದ್ದು ವಿಭಜಕದಿಂದ ಕೆಳಗಿಳಿದರೆ ವೇಗವಾಗಿ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವಂತಾಗುತ್ತದೆ. ಇದರಿಂದಾಗಿ ವಾಹನ ಚಾಲಕರು ಆತಂಕದಿಂದಲೇ ವಾಹನ ಚಲಾಯಿಸುವಂತಾಗಿದೆ.
ರಾತ್ರಿಯಾದರೆ ರಸ್ತೆಯ ತುಂಬಾ ತಿರುಗಾಡುವ ಬಿಡಾಡಿ ದನಗಳ ನಿಯಂತ್ರಣಕ್ಕೆ ಯಾರೊಬ್ಬರೂ ಮುಂದಾಗುತ್ತಿಲ್ಲ. ಏಕಾಏಕಿ ದನಗಳು ರಸ್ತೆಗೆ ಇಳಿಯುವುದರಿಂದ ವೇಗವಾಗಿ ಸಂಚರಿಸುವ ವಾಹನಗಳು ಅಪಘಾತಕ್ಕೆ ಈಡಾಗುವ ಸಂಭವವಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಮನಹರಿಸಬೇಕಿದೆ. ಬಿಡಾಡಿ ದನಗಳನ್ನು ರಸ್ತೆಗೆ ಇಳಿಯದಂತೆ ಎಚ್ಚರಿಕೆ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಜನತೆಯ ಒತ್ತಾಯ.
ಇಂದು ಜಿಲ್ಲಾ ಪಂಚಾಯ್ತಿ ಸಭೆ
ರಾಯಚೂರು: ಇಲ್ಲಿನ ಜಿಪಂ ಸಾಮಾನ್ಯ ಸಭೆಯು ಜೂ.18ರಂದು ನಡೆಯಲಿದೆ. ಅಂದು ಬೆಳಗ್ಗೆ 11ಕ್ಕೆ ನಗರದ ಜಿಪಂ ಸಭಾಂಗಣದಲ್ಲಿ ಸಭೆಯು ಅಧ್ಯಕ್ಷ ಲಲಿತಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಜಿಪಂ ಪ್ರಕಟಣೆ ತಿಳಿಸಿದೆ.
ಭಾಗ್ಯಲಕ್ಷ್ಮೀ, ಬಿಪಿಎಲ್ ಸಲ್ಲಿಕೆಗೆ ಅವಕಾಶ
ಸಿಂಧನೂರು: ಭಾಗ್ಯಲಕ್ಷ್ಮೀ ಯೋಜನೆಯಡಿ 2011- 12ನೇ ಸಾಲಿನಲ್ಲಿ ಫಲಾನುಭವಿಗಳ ಪೋಷಕರು ತಾತ್ಕಾಲಿಕ ಬಿಪಿಎಲ್ ಕಾರ್ಡ್ ಲಗತ್ತಿಸಿ ಸಲ್ಲಿಸಿರುವ ಅರ್ಜಿಗಳು ತಿರಸ್ಕೃತಗೊಂಡಿದ್ದು ಶಾಶ್ವತ ಬಿಪಿಎಲ್ ಕಾರ್ಡ್ ಪ್ರತಿ ಸಲ್ಲಿಕೆಗೆ ಕಾಲಾವಕಾಶ ನೀಡಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಾಬಾಯಿ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು 2011-12ನೇ ಸಾಲಿನಲ್ಲಿ (ಜ.1,2011ರಿಂದ ಮಾ.31ರೊಳಗೆ ಜನಿಸಿದ ಮಕ್ಕಳು) ಭಾಗ್ಯಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳ ಪೋಷಕರು ಅರ್ಜಿ ಸಲ್ಲಿಸುವ ತಾತ್ಕಾಲಿಕ ಬಿಪಿಎಲ್ ಪ್ರತಿ ನೀಡಿರುವುದರಿಂದ ಅವು ತಿರಸ್ಕೃತಗೊಂಡಿವೆ. ಅಂತಹ ಪೋಷಕರು ಜೂ.25ರೊಳಗಾಗಿ ಶಾಶ್ವತ ಬಿಪಿಎಲ್ ಪ್ರತಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಸಂಬಂಧಪಟ್ಟ ಮೇಲ್ವಿಚಾರಕರಿಗೆ ಸಲ್ಲಿಸಬೇಕು. ಅರ್ಜಿಗಳು ತಿರಸ್ಕೃತಗೊಂಡರೆ ಪೋಷಕರೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.
ಇತಿಹಾಸದಲ್ಲಿ ಸಾಧನೆ; ಮಾಹಿತಿಗೆ ಕೋರಿಕೆ
ರಾಯಚೂರು: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇತಿಹಾಸ ವಿಷಯದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಇತಿಹಾಸ ಉಪನ್ಯಾಸಕರ ಸಂಘ ನಿರ್ಧರಿಸಿದ್ದು ಅರ್ಹರಿಂದ ಮಾಹಿತಿ ಸಲ್ಲಿಕೆಗೆ ಕೋರಿದೆ.
ಸಂಘವು ಈ ಕುರಿತು ಪ್ರಕಟಣೆ ನೀಡಿ, ಜಿಲ್ಲೆಯಲ್ಲಿ ಇತಿಹಾಸ ವಿಷಯದಲ್ಲಿ ಅತೀ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಚಾರ್ಯರು ಇತಿಹಾಸ ವಿಷಯದಲ್ಲಿ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಹೆಸರುಗಳನ್ನು ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಐಲಿ, ಇತಿಹಾಸ ಉಪನ್ಯಾಸಕರು, ಸರ್ಕಾರಿ ಪದವಿ ಕಾಲೇಜು ಪೊಲೀಸ್ ಕಾಲೋನಿ, ರಾಯಚೂರು ಇಲ್ಲಿಗೆ ಜೂ.22ರೊಳಗೆ ತಲುಪಿಸಲು ಕೋರಲಾಗಿದೆ.
ಆಧಾರ್ ವಿತರಣೆ ಕೇಂದ್ರ ಆರಂಭ
ದೇವದುರ್ಗ: ದೇಶದ ಪ್ರತಿಯೊಬ್ಬ ಪ್ರಜೆಗೆ ಆಧಾರ್ ಗುರುತಿನ ಚೀಟಿಯ ಅವಶ್ಯಕತೆಯಿದೆ. ಕೇಂದ್ರ ಸರ್ಕಾರದ ವಿವಿಧ ಸವಲತ್ತು ಪಡೆಯಲು ಕಾರ್ಡ್ ಹೊಂದುವುದು ಅವಶ್ಯ ಎಂದು ಶಾಸಕ ವೆಂಕಟೇಶ ನಾಯಕ ಸಲಹೆ ನೀಡಿದರು. ಅವರು ಇತ್ತೀಚೆಗೆ ಪುರಸಭೆಯ ವ್ಯಾಪ್ತಿಯ ಬಸವೇಶ್ವರ ಓಣಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಆಧಾರ್ ಕಾರ್ಡ್ ವಿತರಣೆ ಕೇಂದ್ರ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಪಟ್ಟಣದಲ್ಲಿ ಅಂಚೆ ಕಚೇರಿಯಲ್ಲಿ ಮಾತ್ರ ಈ ಕಾರ್ಡ್ ವಿತರಿಸುವ ಕೇಂದ್ರ ತೆರೆಯಲಾಗಿತ್ತು. ಅದರಿಂದ ಭಾರೀ ನೂಕುನುಗ್ಗಲಾಗುತ್ತಿತ್ತು. ಸದ್ಯ ಕೇಂದ್ರ ತೆರೆದಿದ್ದರಿಂದ ಜನತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನ್ಯಾಯಾಂಗ ತರಬೇತಿ
ರಾಯಚೂರು: ಜಿಲ್ಲೆಯ ಹಿಂದುಳಿದ ವರ್ಗಗಳಿಗೆ ಸೇರಿದ ಕಾನೂನು ಪದವೀಧರರಿಗೆ ತರಬೇತಿ ಭತ್ಯೆ ನೀಡಲು ಅರ್ಜಿ ಕರೆಯಲಾಗಿದೆ. ಪ್ರವರ್ಗ- 1, 2ಎ, 3ಎ, 3ಬಿ ವರ್ಗಕ್ಕೆ ಸೇರಿದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ಭತ್ಯೆಗಾಗಿ ಪ್ರಸಕ್ತ ಸಾಲಿಗೆ ಅರ್ಜಿ ಕರೆದಿದ್ದು, ತರಬೇತಿ ವೇಳೆ 1 ಸಾವಿರ ನೀಡಲಾಗುವುದು. 30 ವರ್ಷ ಮೀರದ 15 ಸಾವಿರ ವಾರ್ಷಿಕ ಆದಾಯ ಹೊಂದಿದ, ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಿಗದಿಪಡಿಸಿದ ದಿನಾಂಕಕ್ಕಿಂತ 2 ವರ್ಷ ಮೊದಲು ಕಾನೂನು ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. 2 ಭಾವಚಿತ್ರ ಸಹಿತ ಜು.5ರೊಳಗೆ ಅರ್ಜಿಗಳನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ರಾಯಚೂರು ಸಲ್ಲಿಸಲು ಸೂಚಿಸಲಾಗಿದೆ.
ಬಹುಮಾನ
ರಾಯಚೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷದಂತೆ 2012ನೇ ವರ್ಷದ ಪುಸ್ತಕ ಬಹುಮಾನ ಯೋಜನೆಗಾಗಿ ಅರ್ಜಿ ಆಹ್ವಾನಿಸಿದೆ. ಕಾವ್ಯ, ಕಾದಂಬರಿ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ, ಆತ್ಮಕಥೆ, ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಸಂಶೋಧನೆ, ಅನುವಾದ ಸಂಕಿರಣ ವಿಭಾಗಗಳಿಂದ ಅರ್ಜಿ ಕರೆಯಲಾಗಿದೆ. ಆಯ್ಕೆಯಾಗುವ ಕೃತಿಗೆ ಅಕಾಡೆಮಿಯಿಂದ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಬರುವ ಕೃತಿಗಳು 2012ರ ಜ.1ರಿಂದ ಡಿ.31ರೊಳಗೆ ಪ್ರಥಮ ಆವೃತ್ತಿಯಲ್ಲಿ ಪ್ರಕಟವಾಗಿರಬೇಕು. ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು ಇಲ್ಲಿಗೆ ನೋಂದಾಯಿಸಿದ ಅಂಚೆ ಮೂಲಕ ಕೊರಿಯರ್ ಇಲ್ಲವೇ ಖುದ್ದಾಗಿ ಜು.15ರೊಳಗೆ ತಲುಪಿಸಬಹುದು.
ಬಾಲಕಿ ಅತ್ಯಾಚಾರಕ್ಕೆ ಯತ್ನ;ಆರೋಪಿ ನ್ಯಾಯಾಂಗ ವಶಕ್ಕೆ
ಸಿಂಧನೂರು: ನಗರದ ಮಹಿಬೂಬಿಯಾ ಕಾಲೋನಿಯ 5 ವರ್ಷದ ಬಾಲಕಿಯನ್ನು ಬ್ಯಾಂಕ್ ಅಧಿಕಾರಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಭಾನುವಾರ ಮಧ್ಯಾಹ್ನ ಜರುಗಿದ ನಂತರ ರಾತ್ರಿ ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ನ ಗಂಗಾವತಿ ಶಾಖೆಯ ಅಧಿಕಾರಿ ಓಬಣ್ಣ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯ ಹಿನ್ನೆಲೆಯಲ್ಲಿ ಬಾಲಕಿಯ ಅತ್ತೆ ರೇಣುಕಮ್ಮ ನೀಡಿದ ದೂರಿನನ್ವಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾತ್ರಿ ಆರೋಪಿಯನ್ನು ನ್ಯಾಯಾಧೀರಾದ ಭಾರತಿ ರಾಯಣ್ಣವರ ಮುಂದೆ ಪೊಲೀಸರು ಹಾಜರುಪಡಿಸಿದರು. ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಭಾನುವಾರ ಘಟನೆಯ ಸುದ್ದಿ ಕೇಳುತ್ತಿದ್ದಂತೆ ಪೊಲೀಸ್ ಠಾಣೆ ಮುಂದೆ ನೂರಾರು ಜನ ಜಮಾಯಿಸಿದ್ದರು. ಸೋಮವಾರ ನಗರದಾದ್ಯಂತ ಇದೇ ವಿಷಯ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು.
ಇಂದು ಯಾಜ್ಞವಲ್ಕ್ಯರ ಜಯಂತಿ
ಸಿಂಧನೂರು: ನಗರದ ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರದಲ್ಲಿ ನಾಳೆ ಜೂ.18 ರಂದು ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಜಯಂತಿ ಆಚರಿಸಲಾಗುವುದು ಎಂದು ಸೇವಾ ಸಮಿತಿ ಅಧ್ಯಕ್ಷ ಎಸ್.ನಾಗೇಂದ್ರಕುಮಾರ ವಕೀಲರು, ಕಾರ್ಯದರ್ಶಿ ಗೋಪಾಲರಾವ್ ಕುಲಕರ್ಣಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಯಂತಿ ಅಂಗವಾಗಿ ಬೆಳಿಗ್ಗೆ 6ಕ್ಕೆ ಕಾಡ ಮಾರುತಿ ದೇವಸ್ಥಾನದಿಂದ ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಭಾವಚಿತ್ರ ಮೆರವಣಿಗೆ ಮೂಲಕ ಶ್ರೀರಾಮ ಮಂದಿರಕ್ಕೆ ಕರೆ ತಂದು ಪ್ರತಿಷ್ಠಾಪಿಸಲಾಗುವುದು. ನಂತರ ಪಂಚಾಮೃತ ಅಭಿಷೇಕ, ಸತ್ಯನಾರಾಯಣ ಪೂಜೆ, ತೀರ್ಥ ಪ್ರಸಾದ ನೆರವೇರುವುದು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳ ಆಗಮಿಸಬೇಕೆಂದು ವಿನಂತಿಸಿದ್ದಾರೆ.