ಪೌರನೀತಿ ವಿಚಾರ ಮನನ ಮಾಡಿ
ಕನ್ನಡಪ್ರಭ ವಾರ್ತೆ , ಸಿಂಧನೂರು , ಜೂ.17
ವಿದ್ಯಾರ್ಥಿಗಳು ಓದಿನೊಂದಿಗೆ ಪೌರನೀತಿಯ ವಿಚಾರ ಮನನ ಮಾಡಿಕೊಳ್ಳಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಭಾರತಿ ರಾಯಣ್ಣವರ್ ಹೇಳಿದರು.
ಸುಕಾಲಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಾಲೆ ಬಿಡಬಾರದು. ಕೆಲ ಪಾಲಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ಕಳುಹಿಸುತ್ತಾರೆ. ಈ ಬಗ್ಗೆ ವಿದ್ಯಾರ್ಥಿಗಳು ಪಾಲಕರ ಮಾತನ್ನು ಕೇಳಬಾರದು. ಶಿಕ್ಷಣದಿಂದ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಅತಿಥಿ ಉಪನ್ಯಾಸಕ ಶೇಖರಪ್ಪ ದುಮತಿ ವಕೀಲರು, ಬಾಲ್ಯ ವಿವಾಹ, ಬಾಲಕಾರ್ಮಿಕರು, ಬಾಲಾಪರಾಧ ಮತ್ತಿತರ ವಿಷಯಗಳ ಕುರಿತು ಮತ್ತು ಎಚ್. ಬಸವರಾಜ ವಕೀಲರು ಜನನ- ಮರಣ ನೋಂದಣಿ ಕಾಯ್ದೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಟಿ. ಹನುಮಂತಪ್ಪ, ನಗರಸಭೆ ಸದಸ್ಯರಾದ ನಾಗಪ್ಪ ಗಿರಿಜಾಲಿ, ಲಕ್ಷ್ಮೀ, ಸುಕಾಲಪೇಟೆ ಪ್ರೌಢಶಾಲೆಯ ಮುಖ್ಯಗುರು ವೀರನಗೌಡ ವಿ. ಪಾಟೀಲ್, ವಕೀಲರ ಸಂಘದ ಕಾರ್ಯದರ್ಶಿ ಹನುಮೇಶ ಕೊಡ್ಲಿ, ಕನಕದಾಸ ಪ್ರೌಢಶಾಲೆ ಶಿಕ್ಷಕ ಸಿದ್ರಾಮಪ್ಪ ಚಳ್ಳೂರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ ವಹಿಸಿದ್ದರು. ಶಿಕ್ಷಕ ಹೊಳೆಯಪ್ಪ ಸ್ವಾಗತಿಸಿದರು. ಶಿಕ್ಷಕ ಭಾರತೀಶ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಲತಾಂಜಲಿ ಕುಲಕರ್ಣಿ ವಂದಿಸಿದರು. ಕನಕದಾಸ ಹಾಗೂ ಸುಕಾಲಪೇಟೆ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.