ಸಿಂಧನೂರು; ಬಿಎಸ್ಸಾರ್ ಕಾಂಗ್ರೆಸ್ಗೆ ಸಾಮೂಹಿಕ ರಾಜಿನಾಮೆ ನಿರ್ಧಾರ
ಕನ್ನಡಪ್ರಭ ವಾರ್ತೆ , ಸಿಂಧನೂರು , ಜೂ.17
ಶ್ರೀರಾಮುಲು ನೇತೃತ್ವದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜಿನಾಮೆ ನೀಡಲು ನಿರ್ಧರಿಸಲಾಗಿದೆ ಎಂದು ಮಾಜಿ ಸಂಸದ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಿಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ವಿಧಾನಸಭಾ ಚುನಾವಣೆ ನಂತರ ಶ್ರೀರಾಮುಲು ಅವರು ತಮ್ಮೊಂದಿಗೆ ಮಾತನಾಡಿಲ್ಲ. ತಾವು ಸಹ ಅವರೊಂದಿಗೆ ಮಾತನಾಡಿಲ್ಲ. ಸ್ಥಳೀಯ ಚುನಾವಣೆ, ವಿಧಾಸನಭಾ ಚುನಾವಣೆಗಳಲ್ಲಿ ಪಕ್ಷದಿಂದ ಫಂಡ್ ಸಹ ಕೊಟ್ಟಿಲ್ಲ. ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಇದೇ ಪರಿಸ್ಥಿತಿ ಇದ್ದಿದ್ದರಿಂದ ಪಕ್ಷ ನೆಲೆ ಹಾಗೂ ವಿಶ್ವಾಸವನ್ನು ಕಳೆದುಕೊಳ್ಳಬೇಕಾಯಿತು ಎಂದರು.
ರಾಜಿನಾಮೆಗೆ ನಿರ್ಧಾರ: ಶ್ರೀರಾಮುಲು ಅವರ ಇಂತಹ ನಡೆಯಿಂದಾಗಿ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದ್ದು, ಸಭೆ ನಡೆಸಲಾಯಿತು. ಸಭೆಯಲ್ಲಿ ಸೇರಿದ್ದ ಸಾವಿರಕ್ಕೂ ಹೆಚ್ಚು ಕಾರ್ಯರ್ತರಿಂದ ತಾವು ಪಕ್ಷವನ್ನು ಬಿಡಬೇಕೆಂಬ ಅಭಿಪ್ರಾಯ ಕೇಳಿ ಬಂತು. ಎಲ್ಲರ ಒಮ್ಮತದ ನಿರ್ಧಾರದಂತೆ ಮೊದಲು ಬಿಎಸ್ಸಾರ್ ಕಾಂಗ್ರೆಸ್ಗೆ ಕಾರ್ಯಕರ್ತರೆಲ್ಲಾ ಪಕ್ಷದ ತಾಲೂಕಾಧ್ಯಕ್ಷ ರಂಗನಗೌಡ ಗೊರೇಬಾಳ ನೇತೃತ್ವದಲ್ಲಿ ರಾಜಿನಾಮೆ ನೀಡಲು ನಿರ್ಧರಿಸಲಾಯಿತು ಎಂದು ಹೇಳಿದರು.
ಕಾಂಗ್ರೆಸ್ಗೆ ಆದ್ಯತೆ, ಅನಿವಾರ್ಯವಾದರೆ ಜೆಡಿಎಸ್: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಬಹಳಷ್ಟು ಕಾರ್ಯಕರ್ತರು ಕಾಂಗ್ರೆಸ್ ಬಿಟ್ಟು ಬಿಟ್ಟು ತಪ್ಪು ಮಾಡಲಾಗಿದೆ. ಆ ತಪ್ಪು ನಿರ್ಣಯದಿಂದ ಅನಿವಾರ್ಯವಾಗಿ ಬಿಎಸ್ಸಾರ್ ಕಾಂಗ್ರೆಸ್ ಸೇರುವ ಸಂದರ್ಭ ಒದಗಿ ಬಂತು. ಆದ್ದರಿಂದ ಮರಳಿ ಕಾಂಗ್ರೆಸ್ಗೆ ಹೋಗಲು ಹೆಚ್ಚಿನ ಒಲವನ್ನು ಕಾರ್ಯಕರ್ತರು ವ್ಯಕ್ತಪಡಿಸಿದರು. ಆದ್ದರಿಂದ ಮೊದಲ ಆದ್ಯತೆ ಕಾಂಗ್ರೆಸ್ಗೆ ಅನಿವಾರ್ಯವಾದರೆ ಜೆಡಿಎಸ್ಗೆ ಹೋಗುವುದಾಗಿ ಉತ್ತರಿಸಿದರು.
ಲೋಕಸಭೆ ಚುನಾವಣೆಗೆ ಸ್ಪರ್ಧೆ: ಕಾರ್ಯಕರ್ತರ ಅಭಿಪ್ರಾಯದಂತೆ ತಾವು ಯಾವ ಪಕ್ಷಕ್ಕೆ ಸೇರ್ಪಡೆಯಾದರೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ ವಿರೂಪಾಕ್ಷಪ್ಪ, ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ ಎರಡು ಬಾರಿ ಭೇಟಿಯಾದರೂ ರಾಜಕೀಯ ವಿಚಾರಗಳನ್ನು ಮಾತನಾಡಿಲ್ಲ. ಅಭಿನಂದನೆ ಸಲ್ಲಿಸಿ ಉಭಯಕುಶಲೋಪರಿ ನಡೆಸಿದ್ದಾಗಿ ಹೇಳಿದರು.
ಸಮಿತಿ ರಚನೆ: ಇಂದಿನ ಸಭೆಯಲ್ಲಿ ರಂಗನಗೌಡ ಗೊರೇಬಾಳ ಅಧ್ಯಕ್ಷತೆಯಲ್ಲಿ 21 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಗ್ರಾಮೀಣ ಕಾರ್ಯಕರ್ತರೊಂದಿಗೆ, ಹಿತೈಷಿಗಳೊಂದಿಗೆ ಮಾತುಕತೆ ನಡೆಸಿ ಯಾವ ಪಕ್ಷಕ್ಕೆ ಹೋದರೆ ಸೂಕ್ತ ಎಂಬ ನಿರ್ಣಯ ತೆಗೆದುಕೊಳ್ಳುತ್ತದೆ. ತದನಂತರ ಮತ್ತೊಮ್ಮೆ ಕಾರ್ಯಕರ್ತರ ಸಭೆಯನ್ನು ಕರೆದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ದಿದ್ದಗಿ ರಮೇಶಪ್ಪ, ಬಾಬರಪಾಷಾ, ಕೆ.ಕರಿಯಪ್ಪ, ಕೆ.ಮರಿಯಪ್ಪ, ಎಂ.ದೊಡ್ಡಬಸವರಾಜ, ರಂಗನಗೌಡ, ಅಮರಪ್ಪ ಮೈಲಾರ, ದಿಲೀಪಕುಮಾರ ಸಕಲೇಚಾ, ವೆಂಕಟೇಶ್ವರರಾವ್, ಮೈನೂದ್ದೀನ್ ಎತ್ಮಾರಿ, ರಫೀ ಅಹ್ಮದ್, ಎಂ.ಎಸ್. ಶ್ರೀನಿವಾಸ, ಸಲ್ಮಾನಖಾನ್, ನಾಗೋಜಿ ಮರಾಠ ಮತ್ತಿತರರು ಉಪಸ್ಥಿತರಿದ್ದರು.