ನೀರಾವರಿ ಇಲಾಖೆ ಅಧೀಕ್ಷಕರಿಗೆ ಬೀಳ್ಕೊಡುಗೆ
ಸಿಂಧನೂರು: ನೀರಾವರಿ ಇಲಾಖೆಯ ಎಂಜಿನಿಯರಿಂಗ್ ಕಾಲುವೆ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಹುಲಿಯಪ್ಪ ಅವರು ಅಧೀಕ್ಷಕರಾಗಿ ಬಡ್ತಿ ಹೊಂದಿ ವಡ್ಡರಹಟ್ಟಿ ವಿಭಾಗದ ಕ್ಯಾಂಪಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಇಲಾಖೆ ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೊಟ್ಟರು.
ನಗರದ ನೀರಾವರಿ ಇಲಾಖೆ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಆರ್. ಮುಲ್ಲಾ ಮಾತನಾಡಿ, ನೌಕರರು ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಬಡ್ತಿ ಹಾಗೂ ವಿವಿಧ ಕಾರಣಗಳಿಗೆ ಬೇರೆ ಸ್ಥಳಗಳಿಗೆ ವರ್ಗಾವಣೆಯಾಗುವುದು ಸಹಜ. ಆದರೆ ಕರ್ತವ್ಯ ನಿರ್ವಹಿಸಿದ ಸ್ಥಳದಲ್ಲಿ ಸಿಬ್ಬಂದಿ ಮತ್ತು ಸಾರ್ವಜನಿಕರೊಂದಿಗೆ ನಡೆದುಕೊಂಡ ರೀತಿ- ನೀತಿ ಹಾಗೂ ಬಾಂಧವ್ಯ ಸದಾ ನೆನಪಿನಲ್ಲಿರುತ್ತದೆ. ಹುಲಿಯಪ್ಪನವರು ಕಚೇರಿಯ ಕರ್ತವ್ಯದಲ್ಲಿ ನಿಷ್ಠೆ ೆ ಮತ್ತು ದಕ್ಷತೆಯಿಂದ ಸೇವೆ ಸಲ್ಲಿಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು. ಲೆಕ್ಕ ಪರಿಶೋಧನಾಧಿಕಾರಿ ವೆಂಕಟೇಶ ಮಠದ ಮಾತನಾಡಿ, ಸದಾ ಸರಳತೆಯಿಂದ ಜೀವಿಸಿ ಜನರ ಕೆಲಸಕ್ಕೆ ಆದ್ಯತೆ ನೀಡಿದ ಹುಲಿಯಪ್ಪ ಹೃದಯ ಶ್ರೀಮಂತರೆಂದು ಬಣ್ಣಿಸಿದರು.
ಅಧೀಕ್ಷಕ ಖಾಜಾ ಮೊಹಿನುದ್ದೀನ್, ಅನುಲೇಖಕ ಉಮಾಪತಿ, ಸಹಾಯಕ ಎಂಜಿನಿಯರ್ಗಳಾದ ತಿಮ್ಮಣ್ಣ, ಪಿ.ಎನ್. ಬಸವರಾಜ, ರಮೇಶ, ಸಿದ್ದಯ್ಯಸ್ವಾಮಿ, ಶಿವಲಿಂಗ ಹಿರೇಮಠ, ಸಗರಪ್ಪ, ಅಮರೇಶ, ರಾಜಾಹುಸೇನ, ಶಂಕ್ರಪ್ಪ ಮತ್ತಿತರರು ಉಪಸ್ಥಿತರಿದ್ದರು. ಪ್ರಥಮ ದರ್ಜೆ ಸಹಾಯಕ ಗುರುಭೀಮರಾವ್ ಕುಲಕರ್ಣಿ ವಂದಿಸಿದರು.
ಪ್ರತಿಭಾನ್ವಿತರಿಗೆ ಪುರಸ್ಕಾರ
ಸಿಂಧನೂರು: ನಗರದ ಆಕ್ಸ್ಫರ್ಡ್ ಕಾಲೇಜ್ನಲ್ಲಿ ಜಿಐಓ (ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್) ವತಿಯಿಂದ 2012-2013 ಸಾಲಿನ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಯಿಶಾ ನಸೀರ್ ಮಾತನಾಡಿ ಶಿಕ್ಷಣವೇ ಶಕ್ತಿಯಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕೃತಿ, ಒಳ್ಳೆಯ ನಡತೆ ಮತ್ತು ಸಮಯ ಪ್ರಜ್ಞೆ ಇದ್ದರೆ ದೇಶದ ಏಳಿಗೆ ಖಂಡಿತ ಸಾಧ್ಯ ಎಂದರು.
ಆಕ್ಸ್ಫರ್ಡ್ ಕಾಲೇಜ್ ಉಪನ್ಯಾಸಕಿ ಈಶ್ವರಿ ಮಾತನಾಡಿದರು. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ಡಾಫಡಿಲ್ಸ್ ಶಾಲೆಯ ವಿದ್ಯಾರ್ಥಿನಿ ಕು.ತೇಜಸ್ವಿನಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪಿಯುಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿನಿಯರಾದ ವಾಸವಿ ಕಾಲೇಜಿನ ಹುಸೇನ್, ದುದ್ದುಪೂಡಿ ಮಹಿಳಾ ಕಾಲೇಜಿನ ವೈಟಲ್ ವರ್ಷ, ಜ್ಞಾನಜ್ಯೋತಿ ಕಾಲೇಜ್ನ ನಂದಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ದುದ್ದುಪುಡಿ ಕಾಲೇಜ್ ಉಪನ್ಯಾಸಕಿ ಗಂಗಮ್ಮ ಮಾತನಾಡಿದರು. ಜಿ.ಐ.ಓ. ಅಧ್ಯಕ್ಷೆ ಪರ್ವಿನ್ ಪ್ರಸ್ತಾವಿಕ ಮಾತನಾಡಿದರು. ಹರ್ಷಿಯಾ ಖನಾವ್ ನಿರೂಪಿಸಿದರು. ಪರ್ವಿನ್ ವಂದಿಸಿದರು.
ಖರ್ಗೆಗೆ ರೇಲ್ವೆ ಖಾತೆ, ಮುಖಂಡರ ಹರ್ಷ
ಲಿಂಗಸ್ಗೂರು: ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರೇಲ್ವೆ ಖಾತೆ ನೀಡಿದ ಹಿನ್ನೆಲೆಯಲ್ಲಿ ದಲಿತ ಸಮಾಜದ ಮುಖಂಡರು ಬಸ್ ನಿಲ್ದಾಣ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದಲಿತ ಸಮಾಜದ ಮುಖಂಡರಾದ ನಿಂಗಪ್ಪ ಪರಂಗಿ, ಪ್ರಭುಲಿಂಗ ಮೇಗಳಮನಿ, ಪರಶುರಾಮ ನಗನೂರು, ಶಿವಪ್ಪ ಮಾಚನೂರು, ಶಿವಪುತ್ರ ಬೀದರ್, ಸಂಜೀವ, ಆಂಜನೇಯ ಭಂಡಾರಿ, ಹುಸೇನಸಾಬ, ಆದಪ್ಪ ಗೆಜ್ಜಲಗಟ್ಟಾ, ಸಿದ್ದಪ್ಪ ಪರಂಗಿ, ಬಸವರಾಜ ತಿಂಥಣಿ, ಯಮನಪ್ಪ ದೇಗಲಮಡಿ, ಶ್ರೀಮಂತ, ರವಿ ಭಂಡಾರಿ, ಶರಣಪ್ಪ ಅರಕೇರಿ, ಚಿನ್ನು ನಾಯಕ, ಬಸವರಾಜ ಸೇರಿದಂತೆ ಇದ್ದರು.
ಲಿಂಗಸ್ಗೂರಿನ ಸಜ್ಜನಶ್ರೀ ಸಂಸ್ಥೆಗೆ ಪರಿಸರಶ್ರೀ ಪ್ರಶಸ್ತಿ
ಕನ್ನಡಪ್ರಭ ವಾರ್ತೆ , ಬೆಂಗಳೂರು , ಜೂ.18
ಪ್ರಸಕ್ತ ಸಾಲಿನ ಪರಿಸರ ಶ್ರೀ ಪ್ರಶಸ್ತಿಯನ್ನು 4 ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಇಬ್ಬರಿಗೆ ಅರಣ್ಯ ಸಚಿವ ಬಿ. ರಮಾನಾಥ್ ರೈ ಮಂಗಳವಾರ ಪ್ರದಾನ ಮಾಡಿದರು.
ರಾಮನಗರದ ಸಾಲುಮರದ ನಿಂಗಣ್ಣ, ಬಾಗಲಕೋಟೆಯ ಪಿ.ಡಿ. ವಾಲೀಕರ್, ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರ, ಮಂಗಳೂರಿನ ಡೆವಲಪ್ಮೆಂಟ್ ಇನಿಶಿಯೇಷನ್ ಫಾರ್ ಸಸ್ಟೆನೇಬಲ್ ಹ್ಯೂಮನ್ ಅಡ್ವಾನ್ಸ್ಮೆಂಟ್(ದಿಶಾ), ಹಾಸನದ ಜಯಲಕ್ಷ್ಮಿ ಐಟಿಸಿ ಲಿಮಿಟೆಡ್, ಲಿಂಗಸ್ಗೂರಿನ ಸಜ್ಜನ ಶ್ರೀ ಕೃಷಿ ಅಧ್ಯಯನ ಮತ್ತು ಗ್ರಾಮೀಣಾಭಿವೃದ್ಧಿ ಕೇಂದ್ರಕ್ಕೆ ಪ್ರಶಸ್ತಿ ವಿತರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೈರು ಹಾಜರಿಯಲ್ಲಿ ಅರಣ್ಯ ಸಚಿವರು ಪ್ರಶಸ್ತಿ ವಿತರಿಸಿದರು. ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಭಾಗದಲ್ಲಿ ಆಗುತ್ತಿರುವ ತ್ಯಾಜ್ಯ ಸಮಸ್ಯೆಗೆ ಸಾರ್ವಜನಿಕರ ಬೇಜವಬ್ದಾರಿಯೂ ಕಾರಣವಾಗಿದೆ. ತ್ಯಾಜ್ಯ ನಿರ್ವಹಣೆಯೂ ಪ್ರತಿಯೊಬ್ಬರ ಮನೆಯಿಂದಲೇ ಪ್ರಾರಂಭವಾಗಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನಾಚಾರ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮಲ್ಲೇಶ್ವರದ ಶಾಸಕ ಡಾ.ಅಶ್ವತ್ಥ್ನಾರಾಯಣ ಉಪಸ್ಥಿತರಿದ್ದರು.
ಕೃವಿವಿ; ನಾಳೆ ರಾಷ್ಟ್ರ ಮಟ್ಟದ ಕಾರ್ಯಾಗಾರ
ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಜೂ.20ರಂದು ಅಖಿಲ ಭಾರತ ಸಂಯೋಜಿತ ಸವಳು ಮಣ್ಣಿನ ನಿರ್ವಹಣೆ ಮತ್ತು ಕೃಷಿಯಲ್ಲಿ ಸವಳು ನೀರಿನ ಬಳಕೆ ಸಂಶೋಧನಾ ಯೋಜನೆಯ ದ್ವೈವಾರ್ಷಿಕ ಕಾರ್ಯಾಗಾರ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಕಾರ್ಯಾಗಾರ ನಡೆಯಲಿದ್ದು, ವಿಶ್ರಾಂತ ಕುಲಪತಿ ಪ್ರೊ. ಎಸ್.ಎಸ್. ಖನ್ನಾ ಉದ್ಘಾಟಿಸಲಿದ್ದಾರೆ. ಕೃಷಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆಂದು ವಿವಿ ಪ್ರಕಟಣೆ ತಿಳಿಸಿದೆ.
'ಖಾತ್ರಿ': ಸಚಿವರಿಗೆ ಮನವಿ
ದೇವದುರ್ಗ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸಿದ ಗ್ರಾಮೀಣ ಕೂಲಿ ಕಾರ್ಮಿಕರರಿಗೆ ಕೂಲಿ ಕೆಲಸ, ನಿರುದ್ಯೋಗ ಭತ್ಯೆ ನೀಡಬೇಕೆಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ತಾಲೂಕು ಸಮಿತಿ ಮನವಿ ಮಾಡಿದೆ. ಈ ಕುರಿತು ಸಚಿವ ಎಚ್.ಕೆ. ಪಾಟೀಲ್ ಅವರು ತಾಲೂಕಿಗೆ ಸೋಮವಾರ ಭೇಟಿ ನೀಡಿದ ವೇಳೆ ಮನವಿ ಸಲ್ಲಿಸಿ, ಯೋಜನೆ ಅಡಿ ದುಡಿದ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಆಗುತ್ತಿಲ್ಲ ಎಂದು ದೂರಿದರು. ಕೂಲಿ ಹಣ ಪಡೆಯಲೂ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸುವಂಥ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆಂದು ಸಂಘಟನೆಯ ಪ್ರಮುಖರಾದ ರಂಗಪ್ಪ ಬಿ.ಆರ್. ಗುಂಡಾ, ವಿಠ್ಠಲ್ ಚವ್ಹಾಣ, ಗೋವಿಂದ ಚವ್ಹಾಣ, ಉಸ್ಮಾನ್ ಸಾಬ್ ದೇವತಗಲ್, ಅಂಬರೇಶ ಬಿ.ಆರ್. ಗುಂಡಾ ಒತ್ತಾಯಿಸಿದರು.
ಅನುದಾನಕ್ಕೆ ಆಗ್ರಹಿಸಿ ಮನವಿ
ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿರುವ ಬೂದಿಬಸವೇಶ್ವರ ಸಂಸ್ಥಾನ ಮಠಕ್ಕೆ ಸಮುದಾಯ ಭವನ ಮತ್ತು ಭಕ್ತರಿಗೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕಲ್ಪಿಸಲು ನೀರಿನ ಮೇಲ್ತೊಟ್ಟಿ ನಿರ್ಮಾಣ ಮಾಡುವಂತೆ ಜಿಪಂ ಮಾಜಿ ಸದಸ್ಯ ಸದಾಶಿವಯ್ಯ ಸ್ವಾಮಿ ಮನವಿ ಮಾಡಿದ್ದಾರೆ. ಈ ಕುರಿತು ಅವರು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಅಪಘಾತ; ವ್ಯಕ್ತಿ ಸಾವು
ರಾಯಚೂರು: ತಾಲೂಕಿನ ಕಸ್ಬೆ ಕ್ಯಾಂಪ್ನ ಚರ್ಚ್ ಬಳಿ ಲಾರಿ ಮತ್ತು ಟಾಟಾ ಏಸ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಮೃತನನ್ನು ಲಿಯಾಖತ್ ಖಾನ್ ಎಂದು ಗುರುತಿಸಲಾಗಿದೆ. ಈತ ಟಾಟಾ ಏಸ್ನಲ್ಲಿ ಸಾಗುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಲಾರಿಯು ಚಾಲಕನ ನಿರ್ಲಕ್ಷ್ಯದಿಂದ ಟಾಟಾ ಏಸ್ಗೆ ಡಿಕ್ಕಿ ಹೊಡೆದು ಅದರಲ್ಲಿದ್ದ ಖಾನ್ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ; ಒಬ್ಬನ ಬಂಧನ
ರಾಯಚೂರು: ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಗ್ರಾಮದ ಶರಣಗೌಡ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಅವನಿಂದ ವಿವಿಧ ಕಂಪನಿಗಳ ಒಟ್ಟು 2982 ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿ.ಎಚ್. ಮಾಸ್ತರ್ ನಿಧನಕ್ಕೆ ಸಂತಾಪ
ಸಿಂಧನೂರು: ರಾಯಚೂರಿನ ಹಿರಿಯ ಕಾರ್ಮಿಕ ಮುಖಂಡ, ಸಿಪಿಎಂ ಮುಖಂಡ ವಿ.ಎಚ್. ಮಾಸ್ತರ ನಿಧನಕ್ಕೆ ಬಸವರಾಜಪ್ಪ ಮಾಲಿಪಾಟೀಲ್ ವಕೀಲರು, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ, ಹಮಾಲರ ಸಂಘದ ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ, ಅಂಗನವಾಡಿ ಫೆಡರೇಷನ್ ಜಿಲ್ಲಾ ಗೌರವಾಧ್ಯಕ್ಷ ಡಿ.ಎಚ್. ಕಂಬಳಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆ ಒಬ್ಬ ಅನುಭವಿ ಹೋರಾಟಗಾರನನ್ನು ಕಳೆದುಕೊಂಡಂತಾಗಿದೆ. ಜಿಲ್ಲೆಯಲ್ಲಿ ಯಾವುದಾದರೂ ಕಂಪನಿ, ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಅನ್ಯಾಯವಾದರೆ ಅಲ್ಲಿ ಮಾಸ್ತರ ಹಾಜರಾಗುತ್ತಿದ್ದರು. ಅವರು ಕಾರ್ಮಿಕರಿಗಾದ ನೋವನ್ನು ತಮ್ಮ ನೋವೆಂದು ಭಾವಿಸಿ ಹಗಲಿರುಳು ಹೋರಾಡಿ ನ್ಯಾಯ ಒದಗಿಸುತ್ತಿದ್ದರು. ಅತ್ಯಂತ ಸರಳಜೀವಿಯಾಗಿದ್ದ ಅವರು ತಮ್ಮ ಜೀವನದ್ದುದ್ದಕ್ಕೂ ಹೋರಾಟವನ್ನೇ ನಂಬಿದ್ದರು. ರಾಜಕೀಯ ನಾಯಕರ ಭ್ರಷ್ಟಾಚಾರದ ವಿರುದ್ಧವೂ ನಿಷ್ಠುರವಾಗಿ ಧ್ವನಿ ಎತ್ತುತ್ತಿದ್ದರು. ವಿಶೇಷವಾಗಿ ಇಂದಿರಾ ಗಾಂಧಿಯವರು ಕರಾಳ ತುರ್ತು ಪರಿಸ್ಥಿತಿಯನ್ನು ತಂದಾಗ ಅದನ್ನು ವಿರೋಧಿಸಿ 18 ತಿಂಗಳು ಕಾರಾಗೃಹದಲ್ಲಿದ್ದರು. ಆದರೂ ಕೆಚ್ಚೆದೆಯಿಂದ ಹೋರಾಡಿ ಸಾರ್ಥಕ ಬದುಕು ಕಂಡರು. ಅವರ ನಿಧನ ಇಡೀ ಜಿಲ್ಲೆಯ ಕಾರ್ಮಿಕರಿಗೆ, ಕಾರ್ಮಿಕ ಮುಖಂಡರಿಗೆ ನೋವು ತಂದಿದೆ ಎಂದು ತಿಳಿಸಿದ್ದಾರೆ.
ಸ್ಫೋಟ; ಮಹಿಳೆ ಸಾವು
ರಾಯಚೂರು: ಮಾನವಿ ತಾಲೂಕಿನ ನೀರಮಾನ್ವಿ ಬಳಿಯ ಪೂರೆನಾಯ್ಕ ತಾಂಡಾದಲ್ಲಿ ಮಂಗಳವಾರ ಶಾರ್ಟ್ ಸರ್ಕ್ಯೂಟ್ನಿಂದ ಮನೆಯಲ್ಲಿದ್ದ ರೆಫ್ರಿಜಿರೇಟರ್ನ ಕಾಂಪ್ರೆಸ್ಸರ್ ಸ್ಫೋಟಗೊಂಡು ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಮೃತಳನ್ನು ಮೋನಮ್ಮ(31) ಎಂದು ಗುರುತಿಸಲಾಗಿದೆ. ಮನೆಯ ಬಳಿಯ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಈಕೆಯ ಮನೆಯಲ್ಲಿನ ರೆಫ್ರಿಜಿರೇಟರ್ನ ಕಾಂಪ್ರೆಸ್ಸರ್ ಸ್ಫೋಟಗೊಂಡಿದ್ದರಿಂದ ಈಕೆಗೆ ಬೆಂಕಿ ತಗುಲಿ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ವಿದ್ಯುತ್ ಸಂಪರ್ಕ: ಜೆಸ್ಕಾಂ 97 ಕೇಸ್ ದಾಖಲು
ರಾಯಚೂರು: ಅಕ್ರಮ ವಿದ್ಯುತ್ ಸಂಪರ್ಕ ಮತ್ತು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡವರು ಮೇಲೆ ಜೆಸ್ಕಾಂ ಜಾಗೃತ ದಳದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಗರದಲ್ಲಿ ಸೋಮವಾರ ಮತ್ತು ಮಂಗಳವಾರ ವಿವಿಧೆಡೆ ದಾಳಿ ನಡೆಸಿದ ದಳದ ಅಧಿಕಾರಿಗಳು ಒಟ್ಟು 97 ಪ್ರಕರಣಗಳನ್ನು ದಾಖಲಿಸಿದ್ದು, 14 ಲಕ್ಷ ದಂಡ ವಿಧಿಸಿದ್ದಾರೆ. ನಗರದ ಹರಿಜನವಾಡ, ಎಲ್ಬಿಎಸ್ ನಗರ, ರಾಂಪುರ ಮತ್ತಿತರೆಡೆ ದಾಳಿ ಮಾಡಿದ ಜೆಸ್ಕಾಂ ಜಾಗೃತ ದಳದ ಅಧಿಕಾ ರಿಗಳು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದವರು ಹಾಗೂ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ 97 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಅಂಥ ವಿದ್ಯುತ್ ಗ್ರಾಹಕರಿಗೆ 14 ಲಕ್ಷ ದಂಡ ವಿಧಿಸಿದ್ದಾರೆಂದು ಜೆಸ್ಕಾಂ ಮೂಲಗಳು ತಿಳಿಸಿವೆ.