ಸರ್ಕಾರಿ ಆಸ್ಪತ್ರೆ ವೈದ್ಯರ ಗೈರು; ಪ್ರತಿಭಟನೆ
ಕನ್ನಡಪ್ರಭ ವಾರ್ತೆ , ರಾಯಚೂರು , ಜೂ.18
ಮಾನವಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೋಮವಾರ ವೈದ್ಯರು ಸೇವೆಗೆ ಗೈರು ಹಾಜರಾಗಿದ್ದನ್ನು ಖಂಡಿಸಿ ರೋಗಿಗಳು ಮತ್ತು ಅವರ ಸಂಬಂಧಿಕರು ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಆಸ್ಪತ್ರೆಯಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇದ್ದು, ನೇಮಕಗೊಂಡಿರುವ ವೈದ್ಯರೂ ಗೈರು ಹಾಜರಾದರೆ ರೋಗಿಗಳಿಗೆ ಚಿಕಿತ್ಸೆ ದೊರೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಪ್ರತಿಭಟನಾನಿರತರು ಆಸ್ಪತ್ರೆಯ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಿಗೆ ಆಸ್ಪತ್ರೆ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆಯಿದೆ. ಸಿಬ್ಬಂದಿ ಸಮರ್ಪಕ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಮೇಲಧಿಕಾರಿಗಳಿಗೆ ಗೊತ್ತಿದ್ದೂ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ದೀಪಕ್ ಭೂಸರೆಡ್ಡಿ ಮುಖ್ಯ ವೈದ್ಯರ ಜತೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ತಾಲೂಕಿಗೆ ಸಚಿವರು ಬಂದ ಹಿನ್ನೆಲೆಯಲ್ಲಿ ಅವರ ಜತೆಗಿರುವುದಾಗಿ ತಿಳಿಸಿ ಬೇರೆಯ ವೈದ್ಯರನ್ನು ಆಸ್ಪತ್ರೆಗೆ ಕಳಿಸಿದರು.
ಈ ಸಂದರ್ಭದಲ್ಲಿ ದಲಿತ ಯುವಸೇನೆ ಅಧ್ಯಕ್ಷ ರವಿಕುಮಾರ, ಕೋಳಗೇರಿ ನಿವಾಸಿಗಳ ಸಂಘದ ಅಧ್ಯಕ್ಷ ಚಿದಾನಂದ, ಉರುಕುಂದ, ವೆಂಕಟೇಶ, ಶಿವರಾಜ, ನರಸಿಂಹ ಪುತ್ರಕುಮಾರ ಹಾಗೂ ರಾಜ್ಯ ಯುವ ಮಿತ್ರ ಯುವ ಸೇನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.