ಜ್ವರ ಬಂದರೆ ನಿರ್ಲಕ್ಷಿಸಬೇಡಿ...
ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.19
ಯಾವುದೇ ಜ್ವರವಿರಲಿ ಆದಷ್ಟು ಬೇಗನೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಮಲೇರಿಯಾ ರೋಗ ಖಚಿತಪಟ್ಟಲ್ಲಿ ತಕ್ಷಣ ಅಗತ್ಯ ಚಿಕಿತ್ಸೆ ಪಡೆದುಕೊಂಡರೆ ರೋಗ ಗುಣಪಡಿಸಲು ಸಹಾಯಕವಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ತಳವಾರ ಹೇಳಿದರು.
ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಜರುಗಿದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೊಳ್ಳೆಗಳಿಗೆ ಕಡಿವಾಣ ಹಾಕಿ: ಸೊಳ್ಳೆಯ ನಿಯಂತ್ರಣದಿಂದಲೇ ಮಲೇರಿಯಾ ತಡೆಯಬಹುದಾಗಿದೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ಮಾಡುವುದು, ನೀರಿನ ಟ್ಯಾಂಕ್, ಡ್ರಮ್, ಬ್ಯಾರಲ್ಗಳನ್ನು ವಾರಕೊಮ್ಮೆ ಸ್ವಚ್ಛಗೊಳಿಸುವುದು. ಬಿಸಾಡಿದ ತಗಡಿನ ಡಬ್ಬಗಳು, ತೆಂಗಿನ ಚಿಪ್ಪು, ಟಯರ್ ಮುಂತಾದವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು, ತೀವ್ರ ರೋಗ ಪೀಡಿತ ಪ್ರದೇಶದಲ್ಲಿ ಕೀಟನಾಶಕ ಸಿಂಪರಣಾ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡಿದಲ್ಲಿ ರೋಗ ನಿಯಂತ್ರಿಸಬಹುದು ಎಂದರು.
ಸೋಂಕು ರೋಗ: ತಾಲೂಕು ಆರೋಗ್ಯಾಧಿಕಾರಿ ಡಾ. ಸಯ್ಯದ್ ಹಸೇನ್ ಹುಸೇನ್ ಮಾತನಾಡಿ, ಮಲೇರಿಯಾ ಪರೋಪಜೀವಿಯನ್ನು ಹೊಂದಿದ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯು ಮನುಷ್ಯನಿಗೆ ಕಚ್ಚಿದ 14ರಿಂದ 21 ದಿನಗಳೊಳಗೆ ಜ್ವರ ಪ್ರಾರಂಭವಾಗುತ್ತದೆ. ಇಂತಹ ಒಬ್ಬ ಮಲೇರಿಯಾ ರೋಗಿಯಿಂದ ಅನೇಕರಿಗೆ ಮಲೇರಿಯಾ ಹರಡುವ ಸಂಭವ ಇದೆ. ಯಾರಿಗಾದರೂ ಅತಿಯಾದ ಮೈಚಳಿ, ಮೈಬಿಸಿ, ಅತಿಯಾದ ಬೆವರುವಿಕೆ ಕಂಡುಬಂದಲ್ಲಿ ಅದು ಮಲೇರಿಯಾ ಇರಬಹುದು ಎಂದರು.
ಮಾತ್ರೆ ಉಚಿತ ವಿತರಣೆ: ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಕರವೀರಪ್ರಭು ಕ್ಯಾಲಕೊಂಡ ಮಾತನಾಡಿ, ಮಲೇರಿಯಾ ಎಂದು ಖಚಿತ ಪಟ್ಟಲ್ಲಿ 5 ದಿನಗಳ ಕಾಲ ಕ್ಲೋರುಕ್ವಿನ್ ಮತ್ತು ಪ್ರೈಮಾಕ್ವಿನ್ ಮಾತ್ರೆಗಳನ್ನು ಊಟ ಮಾಡಿದ ನಂತರ ನುಂಗಬೇಕು. 6ನೇ ದಿವಸ ಪುನಃ ರಕ್ತ ಪರೀಕ್ಷೆ ಮಾಡಿಸಿಕೊಂಡು ರೋಗ ಇಲ್ಲದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಈ ಔಷಧಿ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಸಹಾಯಕರಲ್ಲಿ ಉಚಿತವಾಗಿ ದೊರುಕುತ್ತದೆ ಎಂದರು.
ನಗರದ ಉಪ್ಪಾರವಾಡಿ, ಬಡಿಬೇಸ್, ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಮಕ್ಕಳಿಂದ ನಡೆಸಲಾದ ಜಾಥಾವು ಸಾರ್ವಜನಿಕ ಆಸ್ಪತ್ರಯಿಂದ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಈ ವೇಳೆ ನಗರಸಭೆ ಪ್ರಭಾರಿ ಪೌರಾಯುಕ್ತ ಗುಂಡಪ್ಪ ಸಾಲಗುಂದ, ಡಾ. ವಿರುಪಾಕ್ಷಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾ, ನಗರ ಠಾಣೆ ಪಿಎಸ್ಐ ಎನ್.ಆರ್. ನಿಂಗಪ್ಪ, ಎಎಸ್ಐ ಎಚ್.ಎನ್. ನಾಯಕ್, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್, ಬಿಪಿಎಂ ದೀಪಕ್ ಗಾಡವಿ, ನಗರಸಭೆ ವ್ಯವಸ್ಥಾಪಕರಾದ ಗುರುರಾಜ, ಸ್ಯಾನಿಟರಿ ಇನಸ್ಪೆಕ್ಟರ್ ಸೈಯದ್ಪೀರ್ ಸಾಹೇಬ್, ಶಿಕ್ಷಣ ಇಲಾಖೆಯ ಸಿದ್ದೇಶ್ವರಿ, ಮಲೇರಿಯಾ ತಾಂತ್ರಿಕ ಮೇಲ್ವಿಚಾರಕ ಎಫ್.ಎ. ಹಣಗಿ ಹಾಜರಿದ್ದರು.