ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಲದಂಡೆ ನಾಲೆ 'ನಾರಾಯಣ'ನೇ ಬಲ್ಲ!

Lingaraj Badiger
Updated On : 20 Jun 2013, 11:04 am

-ಅಮರೇಶಸ್ವಾಮಿ ಬಲ್ಲಟಗಿ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜೂ.19
ಕೃಷ್ಣಾ ಭಾಗ್ಯ ಜಲ ನಿಗಮದ ನಿರ್ಲಕ್ಷ್ಯದಿಂದ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ ವಿತರಣಾ ನಾಲೆ ಸಂಖ್ಯೆ 7(ಎ) ಎಲ್ಲೆಂದರಲ್ಲಿ ಕಿತ್ತು ಹೋಗಿ ಮುಂಬರುವ ದಿನಗಳಲ್ಲಿ ರೈತರ ಜಮೀನುಗಳಿಗೆ ನೀರು ಹರಿಯುವುದು ಅನುಮಾನವಾಗಿ ಅಧೋಗತಿಗೀಡಾಗಿದೆ.
ನಾರಾಯಣಪುರ ಜಲಾಶಯದ ಬಲದಂಡೆ ಮುಖ್ಯನಾಲೆಯ 35.900 ಕಿಮೀ (ಗುರುಗುಂಟಾ ಹೋಬಳಿಯ ಲೇಕಿಂಚೇರಿ) ಬಳಿ ತೂಬು ಸರಪಳಿ ನಿರ್ಮಿಸಿ ವಿತರಣಾ ನಾಲೆ 7(ಎ) ನಿರ್ಮಾಣ ಮಾಡಲಾಗಿದೆ. ನಾಲೆ 9 ಕಿಮೀ ಉದ್ದವಿದ್ದು 52.56 ಕ್ಯೂಸೆಕ್ ನೀರು ಹರಿವ ಸಾಮರ್ಥ್ಯ ಹೊಂದಿದೆ. ಗುರುಗುಂಟಾ, ಐದಬಾವಿ, ಟಣಮನಕಲ್, ರಾಯದುರ್ಗ, ಹಂದಿಬಗಡಿ ಸೇರಿದಂತೆ ಒಟ್ಟು 5534 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
ವಿತರಣಾ ಕಾಲುವೆ: ಗುರುಗುಂಟಾ ಹೋಬಳಿಯ ಲೇಕಿಂಚೇರಿ ಬಳಿಯಿಂದ ಆರಂಭಗೊಂಡ ವಿತರಣಾ ಕಾಲುವೆ ದಿವಾಣದರದೊಡ್ಡಿ, ಕುರುಬರದೊಡ್ಡಿ, ದೇಸಾಯಿ ದೊಡ್ಡಿ, ಗುಮೇದಾರದೊಡ್ಡಿ, ಗುರಿಕಾರದೊಡ್ಡಿ, ಹುಜರಾತ್ ದೊಡ್ಡಿ, ಅಂಬಿಗೇರದೊಡ್ಡಿ, ಚಿಕಲೇರ ದೊಡ್ಡಿ, ಪೂಜಾರದೊಡ್ಡಿ, ಅಡವಿಬಾವಿ ದೊಡ್ಡಿ ಸೇರಿದಂತೆ ಅನೇಕ ಗ್ರಾಮ ದೊಡ್ಡಿಗಳ ಮೂಲಕ ಹಾದು ಹೋಗಿದೆ. ವಿತರಣಾ ನಾಲೆಯ ಬಹುತೇಕ ಕಡೆಗಿನ ಡ್ರಾಪ್‌ಗಳ ಗೋಡೆಗಳು ಕಾಲುವೆಯಲ್ಲಿ ಮುಗುಚಿ ಬಿದ್ದು, ಸಮರ್ಪಕವಾಗಿ ನೀರು ಹರಿಯಲು ಅಡ್ಡಿಯಾಗಿವೆ. ಇದರಿಂದ ನಾಲೆಯಲ್ಲಿ ಕಲ್ಲು, ಮಣ್ಣು, ಉಸುಕು ಸೇರಿದಂತೆ ಹೂಳು ತುಂಬಿದೆ. ನಾಲೆ ಬದಿಯಲ್ಲಿ ವ್ಯಾಪಕವಾಗಿ ಗಿಡಮರಗಳು ಬೆಳೆದು ನಿಂತಿವೆ.
ಎರಡೂ ಬದಿ ಜಖಂ: ಹತ್ತಾರು ದೊಡ್ಡಿಗಳಲ್ಲಿ ಹಾದು ಹೋಗಿರುವ ನಾಲೆಗೆ ಅನೇಕ ಕಡೆಗಳಲ್ಲಿ ನಿರ್ಮಿಸಿರುವ ಸೇತುವೆ, ಸಿಡಿಗಳು ಸಂಪೂರ್ಣವಾಗಿ ಕುಸಿದಿವೆ. ನಾಲೆಯ ಎರಡೂ ಬದಿಯ ಲೈನಿಂಗ್ ಅನೇಕ ಕಡೆಗಳಲ್ಲಿ ಕಿತ್ತುಹೋಗಿ ಎಲ್ಲೆಂದರಲ್ಲಿ ನೀರು ವೃಥಾ ಪೋಲಾಗುತ್ತದೆ. ನಾಲೆಯ ಎರಡೂ ಬದಿಗಳು ಜಖಂಗೊಂಡಿರುವುದರಿಂದ ನೀರು ನಿರಂತರ ಸೋರಿಕೆಯಾಗಿ ಕೆಲವೆಡೆ ವೀಕ್ಷಣಾ ರಸ್ತೆ ಹಾಳಾಗಿದೆ. ವಿತರಣಾ ನಾಲೆ ಸಂಖ್ಯೆ 7(ಎ) ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಹಾಳಾಗಿದೆ. ಇನ್ನು ನಾಲೆ ವ್ಯಾಪ್ತಿಯ ಉಪವಿತರಣಾ ನಾಲೆ, ಹೊಲಗಾಲುವೆ, ನೆಲಗಾಲುವೆಗಳು ದುರ್ಗತಿಗೀಡಾಗಿದ್ದು, ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರನ್ನು ಚಿಂತೆಗೀಡು ಮಾಡಿದೆ.
ಈಗಾಗಲೇ ಕೃಷ್ಣಾ ನದಿ ಪ್ರದೇಶದ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರಿನ ಒಳಹರಿವು ಇಮ್ಮಡಿಯಾಗಿದೆ. ಕೆಲವೆ ದಿನಗಳಲ್ಲಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಲಾಗುತ್ತದೆ. ಆದರೆ ದುರ್ಗತಿಗೀಡಾದ ನಾಲೆಗಳ ಮೂಲಕ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಸಾಧ್ಯವೇ ಎಂಬ ಪ್ರಶ್ನೆ ರೈತರನ್ನು ಕಾಡತೊಡಗಿದೆ.
ಕೂಡಲೇ ಜನಪ್ರತಿನಿಧಿಗಳು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ನಾಲೆಯನ್ನು ದುರಸ್ತಿಗೊಳಿಸಲು ಮುಂದಾಗಬೇಕೆಂಬುದು ರೈತರ ಒತ್ತಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement