ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.19
ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆ ಮಾಡಿದ ಕ್ರಮವನ್ನು ಖಂಡಿಸಿ ಸಿಪಿಎಂ ತಾಲೂಕು ಘಟಕದಿಂದ ಇತ್ತೀಚೆಗೆ ಪ್ರತಿಭಟನೆ ನಡೆಸಲಾಯಿತು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವ ಪಕ್ಷದ ಕಾರ್ಯಕರ್ತರು, ಈಗಾಗಲೇ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಜನತೆ ಸಂಕಷ್ಟದಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದರಿಂದ ಜನತೆಗೆ ಮತ್ತಷ್ಟು ಆರ್ಥಿಕ ಹೊರೆ ಬೀಳಲಿದೆ ಎಂದು ದೂರಿದ್ದಾರೆ.
ಹೇಳಿದ್ದೇನು, ಮಾಡುತ್ತಿರುವುದೇನು?: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಸರ್ಕಾರ ಬಡವರಿಗೆ ಪಡಿತರ ಅಕ್ಕಿ ವಿತರಿಸುವ ಯೋಜನೆ ಪ್ರಕಟಿಸಿತು. ಆದರೆ ಅದರ ಜಾರಿಯಲ್ಲಿ ವಿಳಂಬ ಮಾಡುವ ಮೂಲಕ ತಾರತಮ್ಯ ಮಾಡುತ್ತಿದೆ. ಅಕ್ಕಿ ವಿತರಣೆ ಯೋಜನೆಯಲ್ಲಿ ಎಲ್ಲರಿಗೆ 30 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದ ಸರ್ಕಾರ, ಈಗ ರಾಗ ಬದಲಿಸಿ, ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಅಕ್ಕಿ ನೀಡುವುದಾಗಿ ಹೇಳುತ್ತಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಡೀಸೆಲ್ ದರ ಏರಿಕೆ, ಸಿಬ್ಬಂದಿ ವೇತನ ಹೆಚ್ಚಳದಿಂದ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ ಎಂದು ಹೇಳುವ ಮೂಲಕ ಬಸ್ ಪ್ರಯಾಣ ದರ ಏರಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ. ನಷ್ಟ ಸರಿದೂಗಿಸಲು ಕೇವಲ ಪ್ರಯಾಣ ದರ ಏರಿಕೆಯೊಂದೇ ಪರಿಹಾರವಲ್ಲ. ಇಂಧನ ದರ ಏರಿಕೆಯಾದಂತೆಲ್ಲ ಪ್ರಯಾಣಿಕರ ಮೇಲೆ ಅದರ ಹೊರೆ ಹೊರಿಸುವುದು ಸರ್ಕಾರದ ಕಾರ್ಯವಾಗಬಾರದು ಎಂದು ಹೇಳಿದ್ದಾರೆ.
ಪ್ರಯಾಣ ದರ ಏರಿಕೆ ಹಿಂಪಡೆಯಲು ಆಗ್ರಹ: ಈ ಹಿನ್ನೆಲೆಯಲ್ಲಿ ಕೂಡಲೇ ಸದ್ಯ ಏರಿಕೆ ಮಾಡಿರುವ ದರ ಕಡಿತಗೊಳಿಸಬೇಕು. ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗಾಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಅವರು ಒತ್ತಾಯಿಸಿದ್ದಾರೆ.
ಪಕ್ಷದ ಪ್ರಮುಖರಾದ ಡಿ.ಎಸ್. ಶರಣಬಸವ, ಎಚ್.ಪದ್ಮಾ,ಪಾರ್ವತಿ, ಶ್ರೀಧರ್, ಚನ್ನಬಸಯ್ಯ, ಬಾಬು ಜಿಲಾನಿ, ಆನಂದ, ಮಲ್ಲಿಕಾ, ಸಂಧ್ಯಾ ಸೇರಿದಂತೆ ಅನೇಕರಿದ್ದರು.