ಮಹೆಬೂಬ ಕಾಲೋನಿ; ನೀರಿಗಾಗಿ ಪರದಾಟ
ಸಿಂಧನೂರು: ನಗರದ ಮಹೆಬೂಬ ಕಾಲೋನಿಯಲ್ಲಿ ಪ್ರತಿ ನಿತ್ಯ ನೀರಿಗೆ ನಾಗರಿಕರು ಪರದಾಡುವಂತಾಗಿದೆ. ಇದಕ್ಕೆ ನಗರಸಭೆ ಬೇಜವಾಬ್ದಾರಿ ಆಡಳಿತವೇ ಕಾರಣ ಎಂದು ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಜಾವೇದ್ ಹುಸೇನ್ ದೇಸಾಯಿ ವಕೀಲರು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚುನಾವಣೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮೂಲ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದರು. ಕಳೆದ ಮೂರು ತಿಂಗಳಿಂದ ಕುಡಿವ ನೀರಿನ ಸಮಸ್ಯೆ ನಗರದ 31 ವಾರ್ಡ್‌ಗಳಲ್ಲಿ ತಾಂಡವವಾಡುತ್ತಿದೆ. ಐದು ದಿನಕ್ಕೊಮ್ಮೆ ನೀರು ಬಂದರೆ ಕುಡಿಯುವ ಮಾತಿರಲಿ, ಬಹಿರ್ದೆಸೆಗೂ ನೀರಿಲ್ಲದಂತಾಗಿದೆ. ಈ ಬಗ್ಗೆ ಶಾಸಕರು ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.