ಟಿಸಿ ಸುಟ್ಟು ಗ್ರಾಮಗಳ ನೀರು ಪೂರೈಕೆಯಲ್ಲಿ ವ್ಯತ್ಯಯ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಜೂ.20
ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಳೆ, ಗಾಳಿ ಮತ್ತು ಸಿಡಿಲಿಗೆ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿವೆ. ವಿದ್ಯುತ್ ಅಭಾವದಿಂದ ಜನ ಜೀವನ ಅಸ್ತವ್ಯಸ್ತಗೊಂಡರೂ ಜೆಸ್ಕಾಂ ಇಲಾಖೆ ಪರಿವರ್ತಕ ಪೂರೈಕೆಯಲ್ಲಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ರೈತರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಜೆಸ್ಕಾಂ ಇಲಾಖೆಯ ಸಿಂಧನೂರು ಮತ್ತು ಲಿಂಗಸ್ಗೂರು ವಿಭಾಗೀಯ ಕಾರ್ಯಪಾಲನ ಎಂಜಿನೀಯರ್ ಬಿ.ಕೆ.ಪಟ್ಟಣಶೆಟ್ಟಿ ಹಾಗೂ ಎಇಇ ರಿಯಾಜ್ ಅಹ್ಮದ್ ಅವರಿಗೆ ಮನವಿ ಸಲ್ಲಿಸಿದ ರೈತರು, ತಾಲೂಕಿನ ಆರ್ಯ ಭೋಗಾಪೂರ ಗ್ರಾಮದಲ್ಲಿ ಪರಿವರ್ತಕ ಸುಟ್ಟು ತಿಂಗಳು ಗತಿಸಿದೆ. ಇದರಿಂದ ಒಂದು ಕಿಮೀ ದೂರದ ಹಳ್ಳದ ಕಲುಷಿತ ನೀರು ತಂದು ಸೇವಿಸುವ ಪರಿಸ್ಥಿತಿ ಬಂದೊದಗಿದೆ. ಕಡದರಾಳ ಗ್ರಾಮದಲ್ಲಿ ಪರಿವರ್ತಕ ಇಲ್ಲದ ಪ್ರಯುಕ್ತ ವಿದ್ಯುತ್ ಅಭಾವ ಎದುರಾಗಿದೆ. ಕಲುಷಿತ ನೀರು ಸೇವಿಸಿ ವಾಂತಿಭೇದಿ ಉಂಟಾಗಿ, ಜನತೆ ಆಸ್ಪತ್ರೆ ಸೇರಿದ್ದಾರೆ. ಗೆಜ್ಜಲಗಟ್ಟಾದಲ್ಲಿ ಕಳೆದ 3 ತಿಂಗಳಿಂದ ಪರಿವರ್ತಕವಿಲ್ಲದೆ ನೀರಾವರಿ ಬೆಳೆಗಳು ಹಾಳಾಗುತ್ತಿವೆ. ಕೆಲ ಹಳ್ಳಿಗಳಲ್ಲಿ ವಿದ್ಯುತ್ ಇಲ್ಲದೆ ಹಿಟ್ಟಿನ ಗಿರಣಿ, ಕುಡಿವ ನೀರಿನ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಹಾರಿಕೆ ಉತ್ತರ: ತಾಲೂಕಿನ ವಿವಿಧ ಗ್ರಾಮಗಳ ಜನತೆ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಜೆಸ್ಕಾಂ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಆದರೆ ಇಲಾಖೆ ಅಧಿಕಾರಿಗಳು ಮಾತ್ರ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದರಿಂದ ಜನ-ಜಾನುವಾರುಗಳು ಕುಡಿವ ನೀರಿಗಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಇನ್ನೆರಡು ದಿನದಲ್ಲಿ ವಿದ್ಯುತ್ ಪರಿವರ್ತಕ ಪೂರೈಕೆ ಮಾಡದಿದ್ದರೆ, ಸೋಮವಾರ ಜೆಸ್ಕಾಂ ಕಚೇರಿ ಮುಂದೆ ಉಪವಾಸ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಜೆಸ್ಕಾಂ ಇಲಾಖೆ ಅಧಿಕಾರಿ ಬಿ.ಕೆ. ಪಟ್ಟಣಶೆಟ್ಟಿ ಮಾತನಾಡಿ, ತಾಲೂಕಿನ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ ಬಂದ್ ಆಗಿದ್ದರಿಂದ ಪರಿವರ್ತಕ ಪೂರೈಕೆಗೆ ವಿಳಂಬವಾಗಿದೆ. ತಾಲೂಕಿನಲ್ಲಿ ಸುಮಾರು 42 ಪರಿವರ್ತಕ ಸೇರಿ ವಿಭಾಗದಲ್ಲಿ ಒಟ್ಟು 68 ಪರಿವರ್ತಕಗಳು ಮಳೆ, ಗಾಳಿ, ಸಿಡಿಲಿನಿಂದ ಹಾನಿಗೀಡಾಗಿವೆ. ದುರಸ್ತಿಗಾಗಿ ರವಾನೆ: ಇರುವ ಒಂದೇ ಕೇಂದ್ರದಿಂದ ದುರಸ್ತಿ ಕಾರ್ಯ ವಿಳಂಬವಾಗುವ ಪ್ರಯುಕ್ತ ಈಗಾಗಲೇ ರಾಯಚೂರು, ಗಂಗಾವತಿಯ ದುರಸ್ತಿ ಕೇಂದ್ರಗಳಿಗೆ ಕಳುಹಿಸಲಾಗಿದೆ. ಕಾರಣ ಮೂರ್ನಾಲ್ಕು ದಿನದಲ್ಲಿ ಕುಡಿಯುವ ನೀರಿನ ತೊಂದರೆ ಇರುವ ಆರ್ಯ ಭೋಗಾಪೂರ, ಕಡದರಾಳ, ಕೆಸರಟ್ಟಿತಾಂಡ, ಮಿಂಚೇರಿತಾಂಡ, ಮೆದಿನಾಪೂರ ಸೇರಿದಂತೆ ಅಗತ್ಯ ಗ್ರಾಮಗಳಿಗೆ ವಿದ್ಯುತ್ ಪರಿವರ್ತಕ ಪೂರೈಕೆ ಮಾಡಲಾಗುವುದು.
ಗಂಗಾಕಲ್ಯಾಣ ಯೋಜನೆಯಡಿ ವಿಭಾಗದಲ್ಲಿ ಒಟ್ಟು 193 ಫಲಾನುಭವಿಗಳಿಗೆ ವಿದ್ಯುತ್ ಸರಬರಾಜು ಮಾಡಬೇಕಿದೆ. ನಿಗಮದಿಂದ ಫಲಾನುಭವಿಗಳಿಗೆ ಹಣ ತುಂಬಲು ವಿಳಂಬವಾಗುತ್ತಿದೆ. ಎಲ್ಲಾ ನಿಗಮಗಳಿಂದ ವಿಳಂಬ ತಪ್ಪಿಸಲು ಟೆಂಡರ್ ಪ್ರಕ್ರಿಯೆ ಮಾಡುವ ಉದ್ದೇಶ ಹೊಂದಲಾಗಿದೆ.
ನಿರಂತರ ವಿದ್ಯುತ್: ತಾಲೂಕಿನಲ್ಲಿ ನಿರಂತರ ಜ್ಯೋತಿ ಕಾಮಗಾರಿ ಆರಂಭಿಸಲಾಗಿದೆ. 16 ಫೀಡರ್‌ನಿಂದ ತಾಲೂಕಿನ ಎಲ್ಲ ಗ್ರಾಮಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ರು. 16 ಕೋಟಿ ಟೆಂಡರ್ ಕರೆಯಲಾಗಿದೆ. ಈಗಾಗಲೇ ಮೂರು ಫೀಡರ್ ಕಾಮಗಾರಿ ಮುಗಿದಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣವಾಗದಿದ್ದರೆ ಗುತ್ತಿಗೆದಾರರಿಗೆ ನೋಟೀಸು ನೀಡಿ ಲೈಸೆನ್ಸ್ ಕಪ್ಪು ಪಟ್ಟಿಗೆ ಸೇರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಿಯಾಜ್ ಅಹ್ಮದ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ತಾಪಂ ಉಪಾಧ್ಯಕ್ಷ ಮಾನಪ್ಪ ಚೌಹಾಣ, ಸದಸ್ಯ ರುದ್ರಗೌಡ, ಮುಖಂಡರಾದ ಲಿಂಗರಾಜ ಭೂಪಾಲ ಗೆಜ್ಜಲಗಟ್ಟಾ, ಗುಂಡಪ್ಪ ನಾಯಕ, ಶಂಕರಗೌಡ ಮತ್ತಿತರ ರೈತರು ಇದ್ದರು.
ಲಾರಿ- ಬಸ್ ಡಿಕ್ಕಿ: 15 ಜನರಿಗೆ ಗಾಯ
ಸಿಂಧನೂರು: ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ಗುರುವಾರ ಮಧ್ಯಾಹ್ನ ರಾಯಚೂರಿನಿಂದ ಸಿಂಧನೂರಿಗೆ ಬರುತ್ತಿದ್ದ ಸರ್ಕಾರಿ ಬಸ್ ಹಾಗೂ ಸಿಂಧನೂರಿನಿಂದ ಹೊರಟಿದ್ದ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಗರಸಭೆ ಮಾಜಿ ಅಧ್ಯಕ್ಷ ಕೆ. ಶರಣಪ್ಪ ತೆಂಗಿನಕಾಯಿ ಸೇರಿ 15 ಜನರಿಗೆ ಗಾಯಗಳಾದ ಘಟನೆ ಜರುಗಿದೆ.
ಬಸ್‌ನಲ್ಲಿದ್ದ ಸುಮಾರು 10 ರಿಂದ 15 ಜನರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತರಲಾಗಿದೆ. ಲಾರಿ ಚಾಲಕನ ಕಾಲುಗಳು ಮುರಿದಿವೆ. ಈ ಕುರಿತು ಬಳಗಾನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಬಾಳನಗೌಡ ತಿಳಿಸಿದ್ದಾರೆ.