ಬಸ್ ಪ್ರಯಾಣ ದರ ಏರಿಕೆಗೆ ವಿರೋಧ
ರಾಯಚೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದನ್ನು ಖಂಡಿಸಿ ನಗರದಲ್ಲಿ ಗುರುವಾರ ಎಸ್ ಯುಸಿಐ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯದ ಕಾಂಗ್ರೆಸ್ ಸರ್ಕಾರ ಆರಂಭದಲ್ಲಿಯೇ ಹತ್ತಾರು ರೀತಿಯ ಯೋಜನೆಗಳನ್ನು ಪ್ರಕಟಿಸಿ ಭರವಸೆ ಹುಟ್ಟಿಸಿದ ಬೆನ್ನಲ್ಲೇ ಸಾರಿಗೆ ಸಂಸ್ಥೆಯ ಬಸ್ ದರ ಹೆಚ್ಚಿಸಿದ್ದು ಬಡ ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆ ಹೆಚ್ಚಿಸಿದೆ ಎಂದು ಟೀಕಿಸಿದರು.
ಈಗಾಗಲೇ ರಾಜ್ಯದ ಜನತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿದ್ದು, ಸದ್ಯ ಬಸ್ ಪ್ರಯಾಣ ದರ ಏರಿಕೆಯಿಂದ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸಾರಿಗೆ ಸಂಸ್ಥೆಯು ನಷ್ಟದಲ್ಲಿದೆ ಎಂದು ಹೇಳುತ್ತಲೇ ಪ್ರಯಾಣ ದರ ಏರಿಕೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಸಾರಿಗೆ ಸಂಸ್ಥೆಯಲ್ಲಿ ಉಂಟಾಗುತ್ತಿರುವ ವಿವಿಧ ರೀತಿಯ ಸೋರಿಕೆ ತಡೆಗಟ್ಟುವ ಕಾರ್ಯ ಸರ್ಕಾರ ಮಾಡಬೇಕು. ಆ ಮೂಲಕ ನಷ್ಟ ಕಡಿತಗೊಳಿಸಬೇಕೆಂದು ಒತ್ತಾಯಿಸಿ ಕೂಡಲೇ ಸರ್ಕಾರ ತನ್ನ ನಿರ್ಧಾರ ಬದಲಿಸಿ ಪ್ರಯಾಣ ದರ ಏರಿಕೆ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಡಾ. ಸುನೀತ್ ಕುಮಾರ್, ಎನ್.ಎಸ್. ವೀರೇಶ್, ಚನ್ನಬಸವ ಜಾನೇಕಲ್, ರಾಮಣ್ಣ, ಮಂಜುಳಾ, ಚೇತನಾ ಬನಾರೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.