ಲೋಕಾಯುಕ್ತರ ಹಠಾತ್ ಭೇಟಿ, ಕಡತಗಳ ಪರಿಶೀಲನೆ
ಲಿಂಗಸ್ಗೂರು: ಸ್ಥಳೀಯ ತಹಶೀಲಲ್ಕಚೇರಿಗೆ ರಾಯಚೂರ ಲೋಕಾಯುಕ್ತ ಎಸ್ಪಿ ಎಸ್.ಬಿ. ಪಾಟೀಲರು ಬುಧವಾರ ಹಠಾತ್ ಭೇಟಿ ನೀಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಕಡತಗಳನ್ನು ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳಿಗೆ ಭೇಟಿ ನೀಡಲಾಗಿದ್ದು, ಬುಧವಾರ ಸಿಂಧನೂರ ಮತ್ತು ಲಿಂಗಸ್ಗೂರು ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಪರಿಶೀಲನೆ ನಡೆಸಲಾಯಿತು.
ಸೂಚನೆ: ಈ ಸಂದರ್ಭದಲ್ಲಿ ತಹಸೀಲ್ದಾರ್ ಕಚೇರಿಗೆ ಜನರಿಂದ ಪ್ರಮಾಣ ಪತ್ರ ಪಡೆಯಲು ಸಾವಿರಾರು ಅರ್ಜಿಗಳು ಬಂದಿವೆ.
ಇದರಲ್ಲಿ ಸುಮಾರು 492ಕಡತಗಳು ನಿಗದಿತ ಸಮಯದಲ್ಲಿ ನೀಡದೆ ಇರುವುದು ಕಂಡು ಬಂದಿದೆ. ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ನೀಡುವಂತೆ ತಹಸೀಲ್ದಾರರಿಗೆ ಕಟ್ಟು ನಿಟ್ಟಾಗಿ ಸೂಚನೆ ನೀಡಲಾಗಿದೆ. ಅಲ್ಲದೆ ಜಿಲ್ಲೆಯ ಎಲ್ಲ ತಾಲೂಕ ಕಚೇರಿಗಳ ವಿವರ ಇನ್ನೆರಡು ದಿನದಲ್ಲಿ ರಾಜ್ಯ ಲೋಕಾಯುಕ್ತರಿಗೆ ವರದಿ ಸಲ್ಲಿಸಲಾಗುವುದೆಂದು ತಿಳಿಸಿದರು.
ರೈತ ಮುಖಂಡರ ಭೇಟಿ: ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ನೇತೃತ್ವದಲ್ಲಿ ರೈತ ಮುಖಂಡರು ಲೋಕಾಯುಕ್ತರನ್ನು ಭೇಟಿ ಮಾಡಿ, ಜೆಸ್ಕಾಂ ಇಲಾಖೆ ಸುಟ್ಟ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿಗೊಳಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ.
ಅಲ್ಲದೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ. ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ಲೋಕಾಯುಕ್ತ ಎಸ್ಪಿ ಎಸ್.ಬಿ. ಪಾಟೀಲ ಪ್ರತಿಕ್ರಿಯಿಸಿ, ವಿದ್ಯುತ್ ಪರಿವರ್ತಕ ದುರಸ್ತಿ ಮತ್ತು ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಕುರಿತು ಜೆಸ್ಕಾಂ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಕುರಿತು ಲಿಖಿತ ದೂರು ಸಲ್ಲಿಸಿದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಪಿಐ ದೌಲತ್ ಕುರಿ, ತಹಸೀಲ್ದಾರ ಎನ್.ಬಿ. ಪಾಟೀಲ್, ನಾಡ ತಹಸೀಲ್ದಾರ್ ಭಾನುಮತಿ ಮತ್ತಿತರರು ಇದ್ದರು.