ಹೆಚ್ಚುತ್ತಿರುವ ಸವಳು ಮಣ್ಣು, ನೀರು: ಶರ್ಮಾ ಕಳವಳ
ರಾಯಚೂರು: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸವಳು ಮಣ್ಣಿನ ನಿರ್ವಹಣೆ ಮತ್ತು ಸವಳು ನೀರಿನ ಬಳಕೆ ಕೃಷಿ ವಿಜ್ಞಾನಿಗಳಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹರಿಯಾಣಾದ ಕರ್ನಾಲ್‌ನ ಸೆಂಟ್ರಲ್ ಸೊಯ್ಲ್, ಸಾಲಿನಿಟಿ ರಿಸರ್ಚ್ ಸಂಸ್ಥೆಯ ನಿರ್ದೇಶಕ ಡಾ.ಡಿ.ಕೆ.ಶರ್ಮಾ ಕಳವಳ ವ್ಯಕ್ತಪಡಿಸಿದರು.
ಅವರು ನಗರದಲ್ಲಿ ಗುರುವಾರ ಕೃಷಿ ವಿವಿಯಲ್ಲಿ ಆಯೋಜಿಸಿದ್ದ ಸವಳು ಮಣ್ಣಿನ ನಿರ್ವಹಣೆ ಮತ್ತು ಸವಳು ನೀರಿನ ಬಳಕೆ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ನೀರಿನ ಅತೀಯಾದ ಬಳಕೆ ಮತ್ತು ಅನಗತ್ಯ ಸಂಗ್ರಹಣೆಯಿಂದಾಗಿ ಕೃಷಿ ಜಮೀನಿಗೆ ಮಾರಕವಾಗುತ್ತಿದೆ. ಲಭ್ಯವಿರುವ ಜಮೀನಿನಲ್ಲಿಯೇ ದೇಶಕ್ಕೆ ಆಹಾರ ಭದ್ರತೆಯ ಭರವಸೆ ಮೂಡಿಸುವ ಅವಶ್ಯಕತೆಯಿದೆ ಎಂದರು.
ಆತಂಕಕಾರಿ: ಹರಿಯಾಣಾದ ಕರ್ನಾಲ್ ನಲ್ಲಿರುವ ಸವಳು ಮಣ್ಣಿನ ನಿರ್ವಹಣೆ ಮತ್ತು ಸವಳು ನೀರಿನ ಬಳಕೆ ಕುರಿತು ಸಂಶೋಧನಾ ಸಂಸ್ಥೆಯು ಆರಂಭದಲ್ಲಿ ನಡೆಸಿದ ಸಮೀಕ್ಷೆ ವೇಳೆ ದೇಶದ 6.7 ಮಿಲಿಯನ್ ಹೆಕ್ಟೇರ್ ಜಮೀನು ಸವಳಾಗಿ ಪರಿವರ್ತನೆಗೊಂಡಿತ್ತು. ಆದರೆ ಆನಂತರದ ದಿನಗಳಲ್ಲಿ ಈ ಪ್ರಮಾಣ ಈಗ 20ಮಿಲಿಯನ್ ಹೆಕ್ಟೇರ್‌ಗೆ ತಲುಪಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸದ್ಯ ಕೃಷಿ ಸಂಶೋಧನಾ ಸಂಸ್ಥೆಗಳು ಸವಳು ಮಣ್ಣಿನಲ್ಲಿ ಬೆಳೆಯುವ ವಿವಿಧ ತಳಿಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಲ್‌ನ ಸಂಶೋಧನಾ ಸಂಸ್ಥೆಯು ಈಗಾಗಲೇ 7 ತರಹದ ಬತ್ತದ ತಳಿಗಳು, 4 ತರಹದ ಗೋಧಿ ತಳಿಗಳು ಮತ್ತಿತರೆ ಬೆಳೆಗಳ ಬಿತ್ತನೆ ಬೀಜಗಳನ್ನು ಸಂಶೋಧಿಸಿ ಯಶಸ್ಸು ಕಂಡಿದೆ ಎಂದು ಹೇಳಿದರು.
ನ್ಯಾನೋ ತಂತ್ರಜ್ಞಾನ: ಸಂಶೋಧನಾ ಸಂಸ್ಥೆಯು ಸವಳು ಪ್ರದೇಶದಲ್ಲಿ ಬೆಳೆಯಬಹುದಾದ ಬೆಳೆಗಳ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಹಾಗೆಯೇ ನ್ಯಾನೋ ತಂತ್ರಜ್ಞಾನದ ಅಳವಡಿಕೆಯ ಮೂಲಕ ಸವಳಾಗಿ ಪರಿವರ್ತನೆಗೊಂಡಿರುವ ಕೃಷಿ ಜಮೀನಿಗೆ ಮರುಜೀವ ತುಂಬುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವುದಾಗಿ ತಿಳಿಸಿದರು.
ಯೋಜನಾ ಸಮನ್ವಯಕಾರ ಡಾ.ಎಸ್.ಕೆ. ಅಂಬಾಸ್ತ್ ಮಾತನಾಡಿ, ಮಣ್ಣಿನ ಮತ್ತು ನೀರಿನ ಗುಣಮಟ್ಟ ಆಧರಿಸಿ ಬೆಳೆ ಬೆಳೆಯುವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ಸವಳು ಮಣ್ಣಿನ ನಿರ್ವಹಣೆ ನಿಟ್ಟಿನಲ್ಲಿ ಮತ್ತಷ್ಟು ಸಂಶೋಧನೆಯ ಅವಶ್ಯಕತೆಯಿದೆ ಎಂದು ಹೇಳಿದರು. ಈ ವೇಳೆ ರಾಯಚೂರು ಕೃಷಿ ವಿವಿಯ ಡಾ.ಬಿ.ಎಸ್. ಜನಾಗೌಡರ್ ವಿಷಯ ಮಂಡಿಸಿದರು.
--