ಶಾಸಕರ ಆಶ್ವಾಸನೆ ಭಾಷಣಕ್ಕೆ ರೈತ ಆಕ್ರೋಶ
ಕನ್ನಡಪ್ರಭ ವಾರ್ತೆ , ಲಿಂಗಸ್ಗೂರು , ಜೂ.21
ಸ್ಥಳೀಯ ಕೃಷಿ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದ ಲಿಂಗಸ್ಗೂರು ತಾಲೂಕು ಕೃಷಿ ಉತ್ಸವ-2013ರ ಕಾರ್ಯಕ್ರಮದಲ್ಲಿ ಲಿಂಗಸ್ಗೂರು ಮತ್ತು ಮಸ್ಕಿ ಕ್ಷೇತ್ರಗಳ ಶಾಸಕರಿಬ್ಬರು ಸರ್ಕಾರದ ಯೋಜನೆಗಳ ಕುರಿತ ಆಶ್ವಾಸನೆಗಳ ಸುರಿಮಳೆಯ ಭಾಷಣ ಮಾಡುತ್ತಿದ್ದ ಸಮಯದಲ್ಲಿ ರೈತ ಕುಪ್ಪಣ್ಣ ಕರಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು.
ಸರ್ಕಾರದ ವಿವಿಧ ಯೋಜನೆಗಳ ಕುರಿತು ಅಧಿಕಾರಿಗಳು ಹೋಬಳಿ ಮಟ್ಟದ ರೈತರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ವಿವಿಧ ಇಲಾಖೆಗಳ ಮೂಲಕ ದೊರೆಯುವ ಸವಲತ್ತುಗಳನ್ನು ರೈತರು ಸಮರ್ಪಕವಾಗಿ ಸದುಪಯೋಗ ಪಡೆದುಕೊಳ್ಳುವ ಜೊತೆಗೆ ಅಧಿಕಾರಿಗಳಿಂದ ಮತ್ತು ಅನುಭವಿ ರೈತರ ಸಲಹೆ ಪಡೆದು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಮುಂದೆ ಬರಬೇಕಿದೆ.
ಬರೀ ಭರವಸೆ: ಕೃಷಿಯ ಜೊತೆಗೆ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಉಪಕಸಬು ಮಾಡುವ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕೆಂಬ ಹಲವಾರು ಭರವಸೆ, ಆಶ್ವಾಸನೆಗಳು, ಸಲಹೆಗಳ ಕುರಿತು ಭಾಷಣ ಮಾಡಿದರು.
ರೈತ ಆಕ್ರೋಶಕ್ಕೆ ಮೌನವೇ ಉತ್ತರ: ಇದೇ ಸಮಯದಲ್ಲಿ ಕೃಷಿ ಉತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಅನೇಕ ರೈತರ ಮಧ್ಯೆ ಕುಳಿತು ವೀಕ್ಷಿಸುತ್ತಿದ್ದ ರೈತ ಕುಪ್ಪಣ್ಣ ಕರಡಿ ದಿಢೀರನೆ ಎದ್ದು ನಿಂತು, ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಂಬಂಧಿಸಿದ ಕಚೇರಿಗಳಿಗೆ ಅಲೆದಾಡಿದರೂ ನಿಗದಿತ ಸಮಯಕ್ಕೆ ದೊರೆಯುತ್ತಿಲ್ಲ. ವಯೋವೃದ್ಧ ನನ್ನಂತಹ ರೈತರು ವಿವಿಧ ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಅಲೆದು ಸುಸ್ತಾಗಿ ಕಾಲುಗಳು ಬಿದ್ದು ಹೋಗಿವೆ.
ನಮ್ಮಂತಹ ರೈತರ ನೆರವಿಗೆ ಧಾವಿಸದ ಜನಪ್ರತಿನಿಧಿಗಳು ಇಂತಹ ಕಾರ್ಯಕ್ರಮದಲ್ಲಿ ಕೇವಲ ಭಾಷಣ ಬಿಗಿಯುವುದೊಂದೇ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾರ್ಯಕ್ರಮದಿಂದ ಎದ್ದು ಹೊರನಡೆದ ಘಟನೆ ಜರುಗಿತು. ಈ ಸಮಯದಲ್ಲಿ ವೇದಿಕೆ ಮೇಲೆ ಕುಳಿತಿದ್ದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಮೌನವೇ ಉತ್ತರವಾಗಿತ್ತು.