ಒಪೆಕ್ ಪುನಾರಂಭಕ್ಕೆ ಆಗ್ರಹ
ರಾಯಚೂರು: ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ(ಒಪೆಕ್)ಯನ್ನು ಪುನಾರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದೆ. ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿರುವ ಸಂಘಟನೆಯ ಜಿಲ್ಲಾಧ್ಯಕ್ಷ ವಿನೋದರೆಡ್ಡಿ ಮತ್ತಿತರರು, ಕಳೆದೊಂದು ವರ್ಷದಿಂದ ನಗರದ ಒಪೆಕ್ ಆಸ್ಪತ್ರೆ ಮುಚ್ಚಿದ್ದರಿಂದ ಬಡ ಜನತೆಗೆ ಆರೋಗ್ಯ ಸಂಬಂಧಿ ಸಮರ್ಪಕ ಸೌಲಭ್ಯ ದೊರೆಯುತ್ತಿಲ್ಲ ಎಂದು ದೂರಿದ್ದಾರೆ. ಈ ಮೊದಲು ಹೈದರಾಬಾದ್ ಮೂಲದ ಅಪೋಲೋ ಸಂಸ್ಥೆಯು ಒಪೆಕ್ ಆಸ್ಪತ್ರೆಯನ್ನು ನಿರ್ವಹಿಸುತ್ತಿತ್ತು. ಆದರೆ ಸಮರ್ಪಕವಾಗಿ ನಿರ್ವಹಿಸಲಾಗದೇ ರಾಜ್ಯ ಸರ್ಕಾರಕ್ಕೆ ವಹಿಸಿದ್ದ ನಂತರದಲ್ಲಿ ಆಸ್ಪತ್ರೆ ಮುಚ್ಚಲಾಗಿದೆ. ಅದರಿಂದಾಗಿ ಹೈ.ಕ. ಭಾಗದಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳು ಬಡವರಿಗೆ ಮರೀಚಿಕೆಯಾಗಿವೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಯ ಏಕೈಕ ದೊಡ್ಡ ಆಸ್ಪತ್ರೆಯ ಪುನಾರಾಂಭಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.