ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಫಾಯಿ ಕರ್ಮಚಾರಿಗಳಿಗೆ ಅನ್ಯಾಯ: ಆರೋಪ

Vishwanath S
Updated On : 23 Jun 2013, 11:40 am

ಕ.ಪ್ರ. ವಾರ್ತೆ ,  ರಾಯಚೂರು ,  ಜೂ.22
ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿ ದಿ.ಪಿ.ಡಿ. ಸಾಲಪ್ಪನವರ ವರದಿ ಕೂಡಲೇ ಜಾರಿಗೆ ತರಬೇಕು. ಹೊರರಾಜ್ಯಗಳಿಂದ ಬಂದ ಸಫಾಯಿ ಕಾರ್ಮಿಕರಿಗೆ ಉದ್ಯೋಗ ನೀಡದೇ ಸ್ಥಳೀಯರಿಗೆ ಆದ್ಯತೆ ನೀಡುವಂತೆ ರಾಷ್ಟ್ರೀಯ ಸಫಾಯಿ ಮಜ್ದೂರ್ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಬಾಬು ಒತ್ತಾಯಿಸಿದರು.
ಅವರು ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಅನೇಕ ದಶಕಗಳಿಂದ ದೇಶದಲ್ಲಿ ಸಫಾಯಿ ಕರ್ಮಚಾರಿಗಳು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ 85 ಯೋಜನೆಗಳ ಲಾಭ ಇದುವರೆಗೆ ಸಫಾಯಿ ಕರ್ಮಚಾರಿಗಳಿಗೆ ದೊರೆತಿಲ್ಲ ಎಂದು ಆರೋಪಿಸಿದರು.
ತಪ್ಪಿದ ಅವಕಾಶ: ರಾಜ್ಯದ ಎಲ್ಲೆಡೆಯಿರುವ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯನ್ನು ನಗರ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ದುರುದ್ದೇಶದಿಂದ ಬಿಹಾರ ಮೂಲದವರಿಗೆ ನೀಡಿದ್ದಾರೆ. ಅದರಿಂದ ಸ್ಥಳೀಯರಿಗೆ ಉದ್ಯೋಗವಕಾಶ ಕೈ ತಪ್ಪಿದೆ. ಹೊರರಾಜ್ಯಗಳವರಿಗೆ ನಿರ್ವಹಣೆ ಒಪ್ಪಿಸದೇ ಸ್ಥಳೀಯವಾಗಿರುವ ನೂರಾರು ಸಂಖ್ಯೆಯ ಸಫಾಯಿ ಕರ್ಮಚಾರಿಗಳಿಗೆ ಒದಗಿಸುವಂತೆ ಆಗ್ರಹಿಸಿದರು.
ಸಫಾಯಿ ಕರ್ಮಚಾರಿಗಳನ್ನು ದಿನಗೂಲಿ, ಹೊರಗುತ್ತಿಗೆ ಮೂಲಕ ನೇಮಕ ಮಾಡಲಾಗುತ್ತಿದೆ. ಆದರೆ ಕಾಯಂ ಸ್ವರೂಪದ ಕೆಲಸ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಸಫಾಯಿ ಕಾರ್ಮಿಕರ ಸೇವೆಯನ್ನು ಸರ್ಕಾರ ಕೂಡಲೇ ಕಾಯಂಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ರಾಜ್ಯದ ವಿವಿಧ ಪುರಸಭೆ ಮತ್ತು ನಗರಸಭೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಫಾಯಿ ಕಾರ್ಮಿಕರು ಒಳಚರಂಡಿ ಸ್ವಚ್ಛಗೊಳಿಸುವ ವೇಳೆ ಸಾವನ್ನಪ್ಪಿದ್ದಾರೆ. ಇಂಥ ಘಟನೆಗಳು ಕೋಲಾರ, ಮಂಗಳೂರುಗಳಲ್ಲಿ ನಡೆದಿದ್ದು, ಸುರಕ್ಷತಾ ಕ್ರಮಗಳನ್ನು ಕಾರ್ಮಿಕರಿಗೆ ಆಡಳಿತ ಒದಗಿಸುತ್ತಿಲ್ಲ. ಸಫಾಯಿ ಕರ್ಮಚಾರಿಗಳ ಕುಟುಂಬದ ರಕ್ಷಣೆ ಕಾರ್ಯ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಅಕ್ರಮ ಅನುದಾನ: ಆಶ್ರಯ, ಅಂಬೇಡ್ಕರ್ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಸಫಾಯಿ ಕರ್ಮಚಾರಿಗಳಿಗೆ ಮತ್ತು ಪೌರ ಕಾರ್ಮಿಕರ ಅವಲಂಬಿತರಿಗೆ  ಪ್ರಾತಿನಿಧ್ಯ ನೀಡುವ ಕಾರ್ಯ ಸರ್ಕಾರ ಮಾಡಬೇಕಿದೆ ಎಂದು ಒತ್ತಾಯಿಸಿದ ಅವರು, ಸಫಾಯಿ ಕರ್ಮಚಾರಿಗಳಿಗೆ ಸರ್ಕಾರಗಳಿಂದ ಎಸ್ಸಿ ಎಸ್ಟಿ ಕಾರ್ಪೋರೇಷನ್ ಮೂಲಕ ಬಿಡುಗಡೆಯಾಗುವ ಅನುದಾನವನ್ನು ಸಫಾಯಿ ಕಾರ್ಯ ಕೈಗೊಳ್ಳದವರು ಅಕ್ರಮವಾಗಿ ಪಡೆದಿದ್ದಾರೆಂದು ದೂರಿದರು.
ಎಸ್ಸಿ, ಎಸ್ಟಿ ಕಾರ್ಪೋರೇಷನ್ ವತಿಯಿಂದ ನೀಡಲಾಗುವ ಐದು ಲಕ್ಷ ರು. ಅನುದಾನವನ್ನು ಸಫಾಯಿ ಕರ್ಮಚಾರಿ ಗಳಲ್ಲದವರು ಪಡೆದಿದ್ದಾರೆ. ಇದರ ಹಿಂದೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಈ ಬಗ್ಗೆ ಹಲವಾರು ಬಾರಿ ದೂರಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಅಕ್ರಮದಲ್ಲಿ ಅನೇಕ ಎಸ್ಸಿ ಜನಾಂಗದ ಪ್ರಮುಖ ನಾಯಕರು ಭಾಗಿಯಾಗಿದ್ದಾರೆಂದು ಟೀಕಿಸಿದರು.
ನಗರದ ಸಿಯಾ ತಲಾಬ್, ಜಹೀರಾಬಾದ್ ಮತ್ತು ರಾಮಾಂಜನೇಯ ಕಾಲನಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸಫಾಯಿ ಕರ್ಮಚಾರಿಗಳು ವಾಸವಾಗಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ 5 ಸಾವಿರ ಜನ ವಿವಿಧೆಡೆಯಿದ್ದರೂ ಸಮೀಕ್ಷೆ ವೇಳೆ ಸರ್ಕಾರಕ್ಕೆ ಈ ಭಾಗದಲ್ಲಿ ಸಫಾಯಿ ಕರ್ಮಚಾರಿಗಳ ಸಂಖ್ಯೆ ತೀರಾ ಕಡಿಮೆ ಎಂಬ ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದರು.
ಕೈವಾಡ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಫಾಯಿ ಕರ್ಮಚಾರಿಗಳ ಸಂಘಟನೆಯನ್ನು ಸಂಪರ್ಕಿಸಿದಲ್ಲಿ ಸಫಾಯಿ ವೃತ್ತಿಯಲ್ಲಿರುವವರ ಸಮರ್ಪಕ ಮಾಹಿತಿ ನೀಡುವುದಾಗಿ ಅವರು ತಿಳಿಸಿ, ಸರ್ಕಾರದ ಯೋಜನೆಗಳನ್ನು ತಮಗೆ ದೊರೆಯದಂತೆ ಮಾಡುವಲ್ಲಿ ಅಧಿಕಾರಿಗಳು ಹಾಗೂ ಎಸ್ಸಿ ಜನಾಂಗದ ಕೆಲ ನಾಯಕರ ಕೈವಾಡವಿದೆ. ರಾಜಕೀಯವಾಗಿಯೂ ತಮ್ಮ ಜನಾಂಗದವರಿಗೆ ಸೂಕ್ತ ಪ್ರಾತಿನಿಧ್ಯ ನೀಡುವಲ್ಲಿ ಪ್ರಮುಖ ಪಕ್ಷಗಳು ಹಿಂದೇಟು ಹಾಕುತ್ತಿವೆ ಎಂದು ಹೇಳಿದರು.
ಸಫಾಯಿ ಕರ್ಮಚಾರಿಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನೇಕ ಶಿಷ್ಯವೇತನಗಳನ್ನು ಸರ್ಕಾರಗಳು ಪ್ರಕಟಿಸಿದ್ದರೂ ಅವುಗಳ ಜಾರಿಯಲ್ಲಿ ಅಕ್ರಮ ಎಸಗಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಸಫಾಯಿ ಕರ್ಮಚಾರಿಗಳ ಈ ಎಲ್ಲ ಬೇಡಿಕೆಗಳ ಈಡೇರಿಕೆ ನಿಟ್ಟಿನಲ್ಲಿ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement