100ಕ್ಕೆ 5 ಎಕರೆ ಜಮೀನು ಗುಳುಂ!
ಕನ್ನಡಪ್ರಭ ವಾರ್ತೆ , ಮುದಗಲ್ , ಜೂ.23
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆನಂದಪ್ಪ ಕೆ. ಮರಿಯಮ್ಮನಹಳ್ಳಿ ಎಂಬವರು ಪಟ್ಟಣದ ಮೇಗಳಪೇಟೆಯ ನಿವಾಸಿ ಪಕೀರಪ್ಪ ಕುರುಬರ ಎನ್ನವವರಿಗೆ ಸೇರಿದ 4 ಎಕರೆ 8 ಗುಂಟೆ ಜಮೀನನ್ನು ಕೇವಲ 100 ನೀಡಿ ತಮ್ಮ ವಶಕ್ಕೆ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಟ್ಟಣದ ನಿವಾಸಿ ಫಕೀರಪ್ಪ ಕುರುಬರ ಎಂಬವರ ಸರ್ವೆ ನಂ.71/3 ಎನ್ನುವ ಜಮೀನನ್ನು 19.6.1965ರಂದು ಬಿಳಿ ಕಾಗದದ ಮೇಲೆ ಹೆಬ್ಬೆಟ್ಟಿನ ಸಹಿ ಪಡೆದು ಕೇವಲ 100 ನೀಡಿ ಜಮೀನನ್ನು ವಶಕ್ಕೆ ಪಡೆದುಕೊಂಡಿದ್ದಾನೆ. ನಂತರ 28.1.2011ರಲ್ಲಿ ಫಕೀರಪ್ಪನ ಪತ್ನಿ ಸಂಗಮ್ಮಳ ಹೆಸರಿಗೆ ಬದಲಾಯಿಸಿ ನಂತರ ತನ್ನ ಮಗ ಮುತ್ತುನಾಥ ತಂದೆ ಆನಂದಪ್ಪ ನಲ್ಲಭಾಯಿ ಎನ್ನುವಾತನ ಹೆಸರಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾನೆ.
ವಿಧವಾ ವೇತನ ಕೊಡಿಸುವುದಾಗಿ ಹೇಳಿ ವಂಚನೆ: ಫಕೀರಪ್ಪನ ಪತ್ನಿ ಸಂಗಮ್ಮಳಿಗೆ ವಿಧವಾ ವೇತನ ಮಾಡಿಸುವುದಾಗಿ ತಿಳಿಸಿ ಆಕೆಯನ್ನು ಉಪನೋಂದಣಿ ಕೇಂದ್ರಕ್ಕೆ ಕರೆದೊಯ್ದು ನೋಂದಣಿ ಮಾಡಿಸಿ ವಂಚಿಸಲಾಗಿದೆ ಎಂದು ಸಂಗಮ್ಮ ತನ್ನ ಅಳಲನ್ನು ಪತ್ರಕರ್ತರ ಮುಂದೆ ತೋಡಿಕೊಂಡಳು.
ವಿಧವಾ ವೇತನ 15 ಸಾವಿರ ಬಂದಿದೆ ಎಂದು ಹೇಳಿ ಹಣ ನೀಡಿ ನೋಂದಣಿಗೆ ಬಂದಿದ್ದ ಸಾಕ್ಷ್ಯಾಧಾರ ನಂದಪ್ಪ, ಹುಲಗಪ್ಪ ಆನಾಹೊಸೂರು ಅವರಿಗೆ ತನ್ನಿಂದ 3 ಸಾವಿರ ಖುಷಿ(ಟಿಪ್ಸ್) ನೀಡುವಂತೆ ಕೇಳಿ ಪಡೆದರು ಎಂದು ಸಂಗಮ್ಮ ತಿಳಿಸಿದ್ದಾರೆ.
ನ್ಯಾಯಾಲಯಕ್ಕೆ ಮೊರೆ: ಕಳೆದ 50 ವರ್ಷಗಳಿಂದ ಜಮೀನು ಉಳುಮೆ ಮಾಡಿ ಬಂದ ಬೆಳೆಯನ್ನು ತಿಂದಿದ್ದು ಅಲ್ಲದೆ ಜಮೀನು ಕೇಳಲು ಹೋದರೆ ಬೆದರಿಕೆ ಹಾಕುತ್ತಿದ್ದಾನೆ. ಆದ್ದರಿಂದ ತಮಗೆ ಅನ್ಯಾಯವಾಗಿದ್ದು ನ್ಯಾಯಾಲಯದ ಮೊರೆ ಹೋಗಿರುವುದಾಗಿ ಸಂಗಮ್ಮ ತಿಳಿಸಿದರು.
ಗೋಳು: ಫಕೀರಪ್ಪ ಮದ್ಯ ವ್ಯಸನಿಯಾಗಿದ್ದ ಆತನಿಗೆ ಕೇವಲ 100 ನೀಡಿ ಆನಂದಪ್ಪ ಬಿಳಿ ಹಾಳೆಯ ಮೇಲೆ ತಮ್ಮ ಜಮೀನು ಬರೆಯಿಸಿಕೊಂಡಿದ್ದಾನೆ. ಇದರಿಂದಾಗಿ ತನ್ನ ಕುಟುಂಬ ಬೀದಿ ಪಾಲಾಗಿದೆ ಎಂದು ಫಕೀರಪ್ಪನ ಸೊಸೆ ಅಂಬ್ರಮ್ಮ ಗಂ ಶಂಕ್ರಪ್ಪ, ಮಕ್ಕಳಾದ ಸಂಗಪ್ಪ, ಬಸಪ್ಪ ಗೋಳು ತೋಡಿಕೊಂಡಿದ್ದಾರೆ.
ತಮ್ಮ ಜಮೀನನ್ನು ಅನ್ಯಾಯವಾಗಿ ಪಡೆದು ವಂಚಿಸಿರುವ ಆನಂದಪ್ಪನ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಮೋಸದಿಂದ ಜಮೀನು ನೋಂದಣಿ ಮಾಡಿಸಿಕೊಂಡಿರುವುದನ್ನು ರದ್ದುಪಡಿಸಿ ತಮ್ಮ ಜಮೀನು ಮರಳಿ ಕೊಡಿಸುವಂತೆ ನ್ಯಾಯಾಲಯಕ್ಕೆ ಮೊರೆ ಹೋಗಿರುವುದಾಗಿ ತಿಳಿಸಿದರು.
ಕೆರೆ ಒತ್ತುವರಿ?: ಆನಂದಪ್ಪ ಇದೇ ರೀತಿ ಪಟ್ಟಣಕ್ಕೆ ಸಮೀಪದ ಕನ್ನಾಪುರಹಟ್ಟಿ ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿ ಜಮೀನು ಗುಳುಂ ಮಾಡಿರುವ ಪ್ರಕರಣ ಇನ್ನೂ ಮಾಸಿಲ್ಲ. ಆಗಲೇ ಮತ್ತೊಂದು ಜಮೀನು ಕಬಳಿಸಿ ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದೆ.