ಒಪೆಕ್ ಪುನಾರಂಭಕ್ಕೆ ಆಗ್ರಹ
ರಾಯಚೂರು: ನಗರದ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪುನಾರಂಭ ಮತ್ತು ಆಸ್ಪತ್ರೆಯಲ್ಲಿ ಈ ಮೊದಲು ಸೇವೆ ಸಲ್ಲಿಸಿದ ಅನುಭವವಿರುವ 286 ಜನ ಸಿಬ್ಬಂದಿಯ ಪುನಾ ನೇಮಕ ಮಾಡುವಂತೆ ಆಗ್ರಹಿಸಿ ಒಪೆಕ್ ಆಸ್ಪತ್ರೆ ನೌಕರರ ಸಂಘ ಒತ್ತಾಯಿಸಿದೆ.
ಈ ಕುರಿತು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಭಾನುವಾರ ನಗರದಲ್ಲಿ ಮನವಿ ಸಲ್ಲಿಸಿದ ಸಂಘದ ಕಾರ್ಯಕರ್ತರು, ಒಪೆಕ್ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ವಹಿಸಿಕೊಂಡಾಗಿನಿಂದ ಮುಚ್ಚಿದ್ದು ಅದರಿಂದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರು ನೌಕರಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆಂದು ದೂರಿದರು.
396ರ ಬದಲಿಗೆ 200 ಹುದ್ದೆ ನೇಮಕ ಸರಿಯಲ್ಲ: ಈ ಬಗ್ಗೆ ಸತತ 57 ದಿನಗಳ ಹೋರಾಟದ ಫಲವಾಗಿ ಆಸ್ಪತ್ರೆ ಆರಂಭಕ್ಕೆ ಕಳೆದ ಸರ್ಕಾರ ಒಪ್ಪಿದ್ದರೂ ಈವರೆಗೆ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಆಸ್ಪತ್ರೆಗೆ ಅವಶ್ಯವಿರುವ 648 ಹುದ್ದೆಗಳ ಪೈಕಿ 396 ಹುದ್ದೆಗಳನ್ನು ಪ್ರಾಥಮಿಕವಾಗಿ ನೇಮಿಸುವ ಬದಲಿಗೆ ಕೇವಲ 200 ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.
200 ಹುದ್ದೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಹಣೆಗೆ ಸೃಜಿಸದೇ ವೈದ್ಯಕೀಯ ಶಿಕ್ಷಣ ಕಾಲೇಜಿಗೆ ನಿಯೋಜಿಸಲು ಸೃಜಿಸಿದ್ದು ಎಂಬುದು ಸುಳ್ಳಲ್ಲ. ಈ ಹಿಂದೆ 11 ವರ್ಷಗಳ ಕಾಲ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ನೌಕರರ ಭವಿಷ್ಯ ಇದರಿಂದಾಗಿ ಅತಂತ್ರಕ್ಕೆ ಸಿಲುಕಿದೆ ಎಂದು ದೂರಿದರು.
ಕೋರ್ಟ್ ಮೊರೆಗೆ- ಎಚ್ಚರಿಕೆ: ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿಯ ನೇಮಕಾತಿ ವೇಳೆ 286 ಜನ ಸಿಬ್ಬಂದಿಯನ್ನು ಕಡ್ಡಾಯವಾಗಿ ಪುನಾ ನೇಮಕ ಮಾಡಿಕೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯ ತೋರಿದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಸಂಘಟನೆಯ ಕಾರ್ಯಕರ್ತರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಆರ್.ಮಾನಸಯ್ಯ, ಸಂಘದ ಅಧ್ಯಕ್ಷ ವಾಜೀದ್ ಅಲಿ, ಉಪಾಧ್ಯಕ್ಷ ಪ್ರಶಾಂತ ಕುಮಾರ್, ಸದಸ್ಯರಾದ ಮಲ್ಲೇಶ ಕೊಲಿಮಿ, ಎನ್.ಕುಮಾರ್, ವೀರಭದ್ರ ಸೇರಿದಂತೆ ಅನೇಕರಿದ್ದರು.