ಚರಂಡಿಗೆ ಮದ್ಯ ಎಸೆದು ಪ್ರತಿಭಟನೆ
ಕನ್ನಡಪ್ರಭ ವಾರ್ತೆ , ಸಿಂಧನೂರು , ಜೂ.23
ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಮದ್ಯವನ್ನು ಚರಂಡಿಗೆ ಹಾಕಲಾಯಿತು. ತತ್ಷಣವೇ ಹೆಂಡ, ಸಾರಾಯಿ ಸಹವಾಸ ಹೆಂಡತಿ ಮಕ್ಕಳ ಉಪವಾಸ, 1 ಕೆ.ಜಿ. ಅಕ್ಕಿ ಕಡಿಮೆಯಾದರೂ ಚಿಂತೆ ಇಲ್ಲ. ಮದ್ಯ ಬೇಡ, ನಮ್ಮ ನಡಿಗೆ ಮದ್ಯ ಮುಕ್ತ ಕರ್ನಾಟಕದ ಕಡೆಗೆ ಎನ್ನುವ ಘೋಷಣೆಗಳು ಮೊಳಗಿದವು.
ಇಂತಹದ್ದೊಂದು ವಿನೂತನ ಪ್ರತಿಭಟನೆ ಮಾಡುವ ಮೂಲಕ ಮತ್ತಷ್ಟು ಮದ್ಯದ ಅಂಗಡಿಗಳನ್ನು ತೆರೆಯಲು ಹೊಸ ಲೈಸನ್ಸ್ ನೀಡಿಕೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿತನಕ್ಕೆ ಸಿಂಧನೂರಿನ ಯೂತ್ವಿಂಗ್ ಜಮಾಅತೆ ಇಸ್ಲಾಮಿ ಹಿಂದ್ ವಿರೋಧ ವ್ಯಕ್ತಪಡಿಸಿತು.
ಈಗಾಗಲೇ ಇರುವ ಮದ್ಯದ ಅಂಗಡಿಗಳು ಜನರ ಆರೋಗ್ಯವನ್ನು ಹದಗೆಡಿಸುತ್ತಿರುವುದಲ್ಲದೆ, ಸಮಾಜದ ಸ್ವಾಸ್ಥ್ಯವನ್ನು ಅಧೋಗತಿಗೆ ಒಯ್ಯುತ್ತಿವೆ. ಇಂತಹ ಸಂದರ್ಭದಲ್ಲಿ ಮದ್ಯದ ಅಂಗಡಿ ಸ್ಥಾಪಿಸಲು ಹೊಸ ಲೈಸನ್ ನೀಡುವುದು ಯಾವ ನೈತಿಕತೆ ಎಂದು ಪ್ರಶ್ನಿಸಲಾಯಿತು. ಪಾನ ನಿಷೇಧ ಮಾಡಲು ಮುಂದಾಗಬೇಕಾದ ಸರ್ಕಾರ ಮುಕ್ತಪಾನ ನೀತಿಯ ಕಡೆಗೆ ಹೊರಟಿರುವುದನ್ನು ತೀವ್ರವಾಗಿ ಖಂಡಿಸಲಾಯಿತು.
ಚಳುವಳಿಯಲ್ಲಿ ತಾಲೂಕಾ ಸಂಚಾಲಕ ಅಬ್ದುಲ್ ಸಮದ್ ಚೌದ್ರಿ, ಚಾಂದ್ ಪಾಷಾ ಜಾಗೀರದಾರ, ಸೈಯದ್ ಅಹ್ಮದ್, ಕಾರ್ಮಿಕ ಮುಖಂಡ ವೆಂಕನಗೌಡ ಗದ್ರಟಗಿ, ಯೂಸುಫ್, ಮಸೂದ್ ಮತ್ತಿತರರು ಭಾಗವಹಿಸಿದ್ದರು.