ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರೈತರ ಹಿತಕಾಯಲು ಸರ್ಕಾರ ಬದ್ಧ: ಸಚಿವ

Vishwanath S
Updated On : 24 Jun 2013, 11:31 am

ಕನ್ನಡಪ್ರಭ ವಾರ್ತೆ ,  ರಾಯಚೂರು ,  ಜೂ.23
ದೇಶಕ್ಕೆ ಆಹಾರ ಭದ್ರತೆ ಒದಗಿಸಲು ಕೃಷಿಯಿಂದ ವಿಮುಖರಾಗುತ್ತಿರುವ ರೈತರಲ್ಲಿ ಕೃಷಿಯಲ್ಲಿ ಆಸಕ್ತಿ ಮೂಡಿಸಿ ಪುನಾ ಕೃಷಿ ಚಟುವಟಿಕೆಗಳಿಗೆ ತೊಡಗಿಸುವ ಅವಶ್ಯಕತೆಯಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ನಗರದಲ್ಲಿ ಭಾನುವಾರ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ 2ನೇ ದಿನ ಅಖಿಲ ಭಾರತ ಮಟ್ಟದ ಎರಡು ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರ ಬದ್ಧ: ಕೃಷಿಯಲ್ಲಿನ ಆದಾಯ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂಬ ಕೂಗು ವ್ಯಾಪಕವಾಗಿದೆ. ಅದರಿಂದಾಗಿಯೇ ಅನೇಕ ರೈತ ಯುವಕರು ಮಹಾನಗರಗಳತ್ತ ಕೆಲಸ ಹುಡುಕಿಕೊಂಡು ಧಾವಿಸುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷ ಶೇ.10ರಷ್ಟು ಕೃಷಿಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ರೈತರ ಪರ ಯೋಜನೆ ಪ್ರಕಟಿಸುವುದೊಂದೇ ಕೆಲಸವಾಗಬಾರದು. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ರೈತರ ಪರವಾಗಿ ಬದ್ಧತೆ ಮತ್ತು ಯೋಜನಾ ಬದ್ಧ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ತಮಗೆ ಸೂಚಿಸಿದ್ದು ಅಂತೆಯೇ ತಾವು ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದ ಮೂಲಕ ರೈತರಲ್ಲಿ ಉತ್ಸಾಹ ಮೂಡಿಸಿ ಕೃಷಿಯಲ್ಲಿ ಪುನಾ ತೊಡಗಿಸುವ ಕಾರ್ಯ ಮಾಡುವುದಾಗಿ ತಿಳಿಸಿದರು.
ಹಬ್ಬ- ಅನುದಾನ ಕುರಿತು ಚರ್ಚೆ: ಕೃಷಿ ಚಟುವಟಿಕೆಗಳಿಂದ ದೂರವಾಗುತ್ತಿರುವ ರೈತರಲ್ಲಿ ಮುಂಗಾರು ಸಾಂಸ್ಕೃತಿಕ ಹಬ್ಬದಂಥ ಕಾರ್ಯಕ್ರಮಗಳು ಪುನಾ ಚೈತನ್ಯ ಮೂಡಿಸಲಿವೆ. ಇಂಥ ಕಾರ್ಯಕ್ರಮಗಳು ಎಲ್ಲೆಡೆ ಆಯೋಜಿಸುವ ಅವಶ್ಯಕತೆಯಿದೆ. ಗ್ರಾಮೀಣರ ಬದುಕಿನ ಪರಿಚಯಿಸುವ ಕಾರ್ಯವನ್ನು ಮುನ್ನೂರು ಕಾಪು ಸಮಾಜ ಯಶಸ್ವಿಯಾಗಿ ಮಾಡುತ್ತಿದೆ. ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ರಾಯಚೂರು ಹಬ್ಬಕ್ಕೆ ಅಗತ್ಯ ಅನುದಾನ ಒದಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಖಾತೆಯ ಸಚಿವರೊಂದಿಗೆ ಚರ್ಚಿಸುವುದಾಗಿ ಅವರು ಭರವಸೆ ನೀಡಿದರು.
ಸಚಿವರ ಶ್ಲಾಘನೆ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ರೈತರ ಪಾಲಿಗೆ ಮುಂಗಾರು ಆಗಮನ ಅವರ ಕೃಷಿಯಲ್ಲಿನ ಭವಿಷ್ಯ ನಿರ್ಧರಿಸುತ್ತದೆ. ಅಂತೆಯೇ ಎಲ್ಲ ರೈತರೂ ಮುಂಗಾರು ಆಗಮನಕ್ಕಾಗಿ ಕಾದಿದ್ದಾರೆ. ಇಂಥ ಪರಿಸ್ಥಿತಿಯಲ್ಲಿಯೇ ಮುಂಗಾರು ಸಾಂಸ್ಕೃತಿಕ ಹಬ್ಬದ ಆಯೋಜನೆ ಅರ್ಥಪೂರ್ಣವಾಗಿದೆ. ಇದರ ಹಿಂದೆ ಮುನ್ನೂರು ಕಾಪು ಸಮಾಜದ ಶ್ರಮ ಸಾರ್ಥಕತೆ ಕಂಡಿದೆ ಎಂದು ಶ್ಲಾಘಿಸಿದರು.
ರಾಜ್ಯಾದ್ಯಂತ ಇಂಥ ಮುಂಗಾರು ಹಬ್ಬಗಳು ಹೆಚ್ಚೆಚ್ಚು ನಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ಕಲ್ಪಿಸಲಾಗುತ್ತದೆ. ಕೃಷಿಯಲ್ಲಿ ರೈತಾಪಿ ವರ್ಗದ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಇಂಥ ಹಬ್ಬಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಅಗತ್ಯ ಅನುದಾನ ಒದಗಿಸಲಿ: ಸಮಾರಂಭದಲ್ಲಿ ಮಾಜಿ ಶಾಸಕ ಹಾಗೂ ಮುಂಗಾರು ಹಬ್ಬದ ಅಧ್ಯಕ್ಷ ಪಾಪಾರೆಡ್ಡಿ ಮಾತನಾಡಿ, ಕಳೆದ 13 ವರ್ಷಗಳಿಂದ ಮುನ್ನೂರು ಕಾಪು ಸಮಾಜವು ಮುಂಗಾರು ಹಬ್ಬವನ್ನು ಆಚರಿಸುತ್ತಿದೆ. ಸರ್ಕಾರ ಈ ಹಬ್ಬಕ್ಕೆ ಅಗತ್ಯ ಅನುದಾನ ಒದಗಿಸಬೇಕೆಂದು ಮನವಿ ಮಾಡಿದರು.
ಸಮಾರಂಭದ ಸಾನ್ನಿಧ್ಯವನ್ನು ಶ್ರೀ ತಿಪ್ಪೇಶ್ವರ ಸ್ವಾಮೀಜಿ ಹಾಗೂ ಡಾ. ಸಿದ್ದಲಿಂಗ ಶಿವಾಚಾರ್ಯರು ವಹಿಸಿದ್ದರು. ಶಾಸಕರಾದ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಪ್ರತಾಪಗೌಡ ಪಾಟೀಲ್, ಮಾಜಿ ಶಾಸಕ ಬೋಸರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತಕುಮಾರ್, ಮುನ್ನೂರು ಕಾಪು ಸಮಾಜದ ಪ್ರಮುಖರಾದ ಬೆಲ್ಲಂ ನರಸರೆಡ್ಡಿ, ಲಾಲಪ್ಪ, ಜಿ.ಬಸವರಾಜ ರೆಡ್ಡಿ, ಆರ್.ತಿಮ್ಮಾರೆಡ್ಡಿ ಸೇರಿದಂತೆ ಅನೇಕರಿದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ವೀಕ್ಷಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement