ಸಂಶೋಧನೆ ಲಾಭ ರೈತರಿಗೆ ದೊರೆಯಲಿ: ಸಚಿವ ಕೃಷ್ಣ
ಕನ್ನಡಪ್ರಭ ವಾರ್ತೆ , ರಾಯಚೂರು , ಜೂ.23
ಕೃಷಿ ವಿಶ್ವವಿದ್ಯಾಲಯ ವಿಜ್ಞಾನಿಗಳು ರೈತ ಸಮುದಾಯದೊಂದಿಗೆ ಬೆರೆತಾಗ ಮಾತ್ರ ಸಂಶೋಧನೆಗಳ ಲಾಭ ರೈತರಿಗೆ ದೊರೆತು, ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ನಗರದ ರಾಯಚೂರು ಕೃಷಿ ವಿವಿ ಸಭಾಂಗಣದಲ್ಲಿ ಭಾನುವಾರ ಕೃಷಿ ಇಲಾಖೆ ಮತ್ತು ಕೃಷಿ ವಿವಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ರೈತರಿಗೆ ಕೃಷಿಯಲ್ಲಿ ನೆರವಾಗುವಂಥ ಸಂಶೋಧನೆಗಳು ಹೆಚ್ಚೆಚ್ಚು ನಡೆಯಬೇಕಿದೆ ಎಂದು ಸಲಹೆ ನೀಡಿದರು.
ದೂರದೃಷ್ಟಿ ಅಗತ್ಯ: ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಸೇರಿ ವಿವಿಧ ಯಂತ್ರೋಪಕರಣಗಳ ಬಗ್ಗೆ ಮೊದಲೇ ಮಾಹಿತಿ ಸಂಗ್ರಹಿಸಿ ಒದಗಿಸಿದಲ್ಲಿ ಯಾವುದೇ ರೀತಿಯ ಕೊರತೆಯಾಗದು. ಈ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಅಧಿಕಾರಿಗಳು ಈ ನಿಟ್ಟಿನಲ್ಲಿ ಪೂರಕ ಕ್ರಮ ಜರುಗಿಸಬೇಕು ಎಂದರು.
ನೀರಿನ ಮಿತ ಬಳಕೆಗೆ ಅಗತ್ಯ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಮುಂದಿನ ದಿನಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿದ್ದು, ಅದಕ್ಕಾಗಿ ಈಗಿನಿಂದಲೇ ಸಿದ್ಧವಾಗಿರಬೇಕಿದೆ. ನೀರಿನ ಮಿತ ಬಳಕೆಗೆ ಹೆಚ್ಚು ಒತ್ತು ನೀಡಬೇಕು. ಕಡಿಮೆ ನೀರಿನಲ್ಲಿಯೂ ಹೆಚ್ಚಿನ ಇಳುವರಿ ತರುವಂಥ ತಳಿಗಳ ಸಂಶೋಧನೆ ಮಾಡುವಂತೆ ಕೃಷಿ ವಿಜ್ಞಾನಿಗಳಿಗೆ ಸಲಹೆ ನೀಡಿದರು.
ಸಮರ್ಪಕವಾಗಿ ಕಾರ್ಯನಿರ್ವಹಿಸಿ: ಇಲಾಖೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಹುದ್ದೆಗಳು ಭರ್ತಿಯಾಗದಿರುವ ಬಗ್ಗೆ ಅಧಿಕಾರಿಗಳು ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸದ್ಯ ಲಭ್ಯರಿರುವ ಕೃಷಿ ಸಹಾಯಕರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇಂಥ ಸಿಬ್ಬಂದಿಯಿಂದ ರೈತರಿಗೆ ಪ್ರಯೋಜನವಿಲ್ಲ ಎಂದ ಅವರು, ಕೇವಲ ಹುದ್ದೆಗಳ ಭರ್ತಿಯಿಂದ ಸಮಸ್ಯೆ ಪರಿಹಾರ ಕಾಣದು ಎಂದು ಹೇಳಿದರು.
ನೀರು ಮಿತ ಬಳಕೆ- ಜಾಗೃತಿ ಮೂಡಸಿ: ರೈತ ಸಂಪರ್ಕ ಕೇಂದ್ರದಲ್ಲಿ ಬೇಡಿಕೆ ಇರದ ಸಲಕರಣೆಗಳನ್ನು ಬೇಡಿಕೆ ಇರುವಂಥ ಕೇಂದ್ರಕ್ಕೆ ಸ್ಥಳಾಂತರಿಸಿ ವಿತರಿಸಲು ಸೂಚಿಸಿದ ಸಚಿವ ಕೃಷ್ಣ ಭೈರೇಗೌಡರು, ನೀರಾವರಿ ಪ್ರದೇಶಗಳಲ್ಲಿ ಕೂರಿಗೆ ಬತ್ತ ಬಿತ್ತನೆಯಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಅಳವಡಿಸಿ ನೀರಿನ ಮಿತ ಉಪಯೋಗದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವಂತೆ ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್, ಕೃಷಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಅಧಿಕಾರಿಗಳು ಸಭೆಯಲ್ಲಿದ್ದರು.