ಉತ್ತಮ ಆರೋಗ್ಯದಿಂದ ಸುಭದ್ರ ದೇಶ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.24
ಹೆಣ್ಣು ಮಕ್ಕಳಲ್ಲಿ ಆತ್ಮಬಲವನ್ನು ಹೆಚ್ಚಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಲು, ಏಕಾಗ್ರತೆಯನ್ನು ಸಾಧಿಸಲು, ಸುಭದ್ರ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಾಬಾಯಿ ಅಭಿಪ್ರಾಯಪಟ್ಟರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಕಿಶೋರಿಯರಿಗೆ ಐದು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಕ್ತ ಮನಸ್ಸಿನಿಂದ ಚರ್ಚಿಸಿ: ಆರೋಗ್ಯದ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸಲು ಸರ್ಕಾರಗಳು ವಿವಿಧ ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳಲ್ಲಿ ವೈಯಕ್ತಿಕ ಸ್ವಚ್ಛತೆ, ಆರೋಗ್ಯ ಸಂಬಂಧಿ ವಿಷಯಗಳು, ಮಕ್ಕಳ ಹಕ್ಕುಗಳು ಸೇರಿದಂತೆ ವಿವಿಧ ವಿಷಯಗಳನ್ನು ತಿಳಿಸಿಕೊಡಲು ಈ ತರಬೇತಿ ಅನುಕೂಲವಾಗಲಿದೆ. ವಿದ್ಯಾರ್ಥಿನಿಯರು ಯಾವುದೇ ವಿಷಯಗಳನ್ನು ಮುಚ್ಚಿಟ್ಟುಕೊಳ್ಳದೇ ಬಿಚ್ಚು ಮನಸ್ಸಿನಿಂದ ಪಾಲಕರೊಂದಿಗೆ, ಶಾಲಾ ಶಿಕ್ಷಕಿಯರೊಂದಿಗೆ, ಸ್ನೇಹಿತರೊಂದಿಗೆ ಚರ್ಚಿಸಬೇಕೆಂದು ಕಿವಿಮಾತು ಹೇಳಿದರು.
ನಗರದ ಕನಕನಗರ ಸಿಆರ್ಪಿ ವೀರೇಶ ಗೋನವಾರ ಮಾತನಾಡಿ, ಈ ತರಬೇತಿಯಲ್ಲಿ ಪಡೆದ ಅನುಭವಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು. ಸುಕಾಲಪೇಟೆ ಶಾಲಾ ಮುಖ್ಯಗುರು ಅನಂತರಾವ್ ಮಾತನಾಡಿದರು.
ವೈದ್ಯರಾದ ಡಾ. ವಿರೂಪಾಕ್ಷಿ, ಡಾ. ರಮ್ಯ ದೀಪಿಕಾ, ಡಾ. ಭಾಗೀರತಿ, ಸಿಡಿಪಿಒ ಕಚೇರಿಯ ಹಿರಿಯ ಮೇಲ್ವಿಚಾರಕಿ ಸರಸ್ವತಿ ಪಾಟೀಲ, ಖದ್ರಿಯಾ ಕಾಲೋನಿ ಸಿಆರ್ಪಿ ವಿರುಪಣ್ಣ, ಆರೋಗ್ಯ ಇಲಾಖೆಯ ಆನಂದಬಾಯಿ, ಸಿಡಿಪಿಒ ಕಚೇರಿಯ ಸುನೀತಾ, ಶಾಂತಾ, ಮೈತ್ರಾವತಿ, ಕಾತ್ಯಾಯಿನಿ, ಮಹಾದೇವಿ ಸೂಡಿ, ಜಯಲಲಿತಾ ಸೇರಿದಂತೆ ಅನೇಕರು ಇದ್ದರು. ಅಂಗನವಾಡಿ ಮೇಲ್ವಿಚಾರಕಿ ಸುನೀತಾ ಸ್ವಾಗತಿಸಿದರು.